ಕ್ಯಾಲಿಫೋರ್ನಿಯಾ: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಕ್ಯಾಲಿಫೋರ್ನಿಯಾ ಭಾಗದಲ್ಲಿ ಆಕಾಶ ಈಗ ಕಿತ್ತಳೆ ಬಣ್ಣಕ್ಕೆ ತಿರುಗಿದೆ. ಕಳೆದ ವಾರ ಅಮೆರಿಕದ ಉತ್ತರ ಭಾಗದಲ್ಲಿ ಮಿಂಚಿನ ಜತೆ ಬೀಸಿದ ಬಿರುಗಾಳಿಗೆ ಕ್ಯಾಲಿಫೋರ್ನಿಯಾದ 30 ಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಹೊತ್ತಿ ಉರಿಯಿತು.
ಎಲ್ಲೆಡೆ ಹೊಗೆ ತುಂಬಿ ಹೋಗಿದ್ದು, ಹಗಲಲ್ಲೂ ರಾತ್ರಿಯಂತೆ ಕತ್ತಲೆ ವಾತಾವರಣ ಕಂಡುಬರುತ್ತಿದೆ. ಆಕಾಶ ಕಿತ್ತಳೆ ಬಣ್ಣಕ್ಕೆ ತಿರುಗಿದ್ದು, ಆ ವಿಲಕ್ಷಣವನ್ನು ವ್ಯಕ್ತಿಯೊಬ್ಬ ನೋಡುತ್ತಿರುವ ಫೋಟೋ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಯುನೈಟೆಡ್ ಸ್ಟೇಟ್ಸ್ ನ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸಹ ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಹವಾಮಾನದಲ್ಲಾದ ಬದಲಾವಣೆಯ ಕುರಿತು ಮಾತನಾಡಿದ್ದಾರೆ.
“ಪ್ರತಿ ಘಟನೆಗಳೂ ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಪಶ್ಚಿಮ ಕರಾವಳಿಯಲ್ಲಿ ಆದ ಅಗ್ನಿ ಅವಘಡವೇ ಸಾಕ್ಷಿ” ಎಂದು ಒಬಾಮಾ ಹೇಳಿದ್ದಾರೆ.