ಮಿನೆಸೋಟಾ(ಯುಎಸ್): ಕೊರೊನಾ ವೈರಸ್ ಸಾಂಪ್ರದಾಯಿಕ ತರಗತಿಗಳನ್ನು ವರ್ಚುವಲ್ ತರಗತಿಗಳನ್ನಾಗಿ ಬದಲಿಸಿದೆ. ಆನ್ ಲೈನ್ ತರಗತಿ ಮಾಡಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಶಿಕ್ಷಕರಿಗೆ ಹೊಸ ಸವಾಲು. ಅಂಥದ್ದರಲ್ಲಿ ಅತಿ ಹಿರಿಯ ಪ್ರೊಫೆಸರ್ ಒಬ್ಬರು ಆನ್ ಲೈನ್ ತರಗತಿ ನಡೆಸುವ ಫೋಟೋವೊಂದು ನೆಟ್ಟಿಗರ ಗಮನ ಸೆಳೆದಿದೆ.
ಫೇಸ್ ಬುಕ್ ಬಳಕೆದಾರರಾದ ಜುಲಿಯಾ ಕ್ರೊಹನ್ ಮೆಕ್ಲಿಂಗ್ ಎಂಬಾಕೆ ತಮ್ಮ ತಂದೆ ಟಿಪ್ ಟಾಪ್ ಆಗಿ ಪ್ಯಾಂಟ್ ಶರ್ಟ್ ಧರಿಸಿ, ಕಂಪ್ಯೂಟರ್ ಮುಂದೆ ಕುಳಿತು ಆನ್ ಲೈನ್ ಕ್ಲಾಸ್ ಮಾಡುತ್ತಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ.
“ನನ್ನ ತಂದೆ ಸೇಂಟ್ ಥಾಮಸ್ ವಿಶ್ವ ವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಕಳೆದ 50 ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೀಗ 91 ವರ್ಷ. ಹೋಮರ್ ನ ಒಡೆಸ್ಸಿ ಕಾವ್ಯವನ್ನು ಅವರು ಪಾಠ ಮಾಡುವುದನ್ನು ಕೇಳುವುದೇ ಒಂದು ಸಂಭ್ರಮ. ಇಲ್ಲಿ ನೋಡಿ ಹೇಗೆ ಬಾಸ್ ನಂತೆ ಶಿಸ್ತಾಗಿ ಕಂಪ್ಯೂಟರ್ ಮುಂದೆ ಕುಳಿತು ಪಾಠ ಮಾಡುತ್ತಿದ್ದಾರೆ. ಅವರು, ಪಾಠ ಮಾಡುವುದನ್ನು ಇಷ್ಟಪಡುತ್ತಾರೆ” ಎಂದು ಜುಲಿಯಾ ಬರೆದಿದ್ದಾರೆ.
ಫೋಟೋವನ್ನು 62 ಸಾವಿರ ಜನ ಲೈಕ್ ಮಾಡಿದ್ದು, 27 ಸಾವಿರ ಜನ ಶೇರ್ ಮಾಡಿದ್ದಾರೆ. ಹಲವರು ಅವರ ಬಗ್ಗೆ ಕಮೆಂಟ್ ಮಾಡಿ, “ಅವರು ಪಕ್ಕಾ ಪ್ರೊಫೆಸರ್ ರಂತೆ ಡ್ರೆಸ್ ಮಾಡಿ, ಪಾಠ ಮಾಡುತ್ತಿದ್ದಾರೆ. ಎಷ್ಟು ಒಳ್ಳೆ ವ್ಯಕ್ತಿ. ಪಾಠ ಕೇಳುವ ವಿದ್ಯಾರ್ಥಿಗಳೇ ಧನ್ಯ” ಎಂದು ಪ್ರತಿಕ್ರಿಯಿಸಿದ್ದಾರೆ.
https://www.facebook.com/julia.krohnmechling/posts/10223456642063628