ಮೆಲ್ಬೋರ್ನ್: ಯಾವುದೋ ಒಂದು ವಿಷಯದ ಬಗ್ಗೆ ಅರೆಬರೆ ಮಾಹಿತಿ ನೀಡಿ, ಎದುರಿಗಿದ್ದ ವ್ಯಕ್ತಿ ತಲೆ ಕೆಡಿಸಿಕೊಳ್ಳುವಂತೆ ಮಾಡುವುದಕ್ಕೆ ತಲೆಯಲ್ಲಿ ಹುಳು ಬಿಡುವುದು ಎನ್ನುವ ವಾಡಿಕೆ ಇದೆ. ಅದೇ ನಿಜವಾದರೆ…? ಹೌದು, ಮಿದುಳಿನಲ್ಲೂ ಹುಳು ಬೆಳೆಯುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಕೇಳಿದರೇ ಆತಂಕವಾಗುವ ಮಾಹಿತಿಯೊಂದು ಇಲ್ಲಿದೆ.
ಆಸ್ಟ್ರೇಲಿಯಾದ 29 ವರ್ಷದ ಮಹಿಳೆಯ ಮಿದುಳಿನಲ್ಲಿದ್ದ ಪಟ್ಟೆಹುಳು(ಟ್ಯಾಪ್ ವರ್ಮ್ ನ್ನು) ಇತ್ತೀಚೆಗೆ ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಈ ಸಂಬಂಧ ಟ್ರೋಪಿಕಲ್ ಮೆಡಿಸಿನ್ ಆ್ಯಂಡ್ ಹೈಜಿನ್ ಎಂಬ ಅಮೆರಿಕಾದ ಜರ್ನಲ್ ಒಂದು ಸೆ.21 ರಂದು ಅಧ್ಯಯನ ವರದಿ ಪ್ರಕಟಿಸಿದೆ.
ಮಹಿಳೆಗೆ ತಿಂಗಳಲ್ಲಿ ಮೂರ್ನಾಲ್ಕು ಬಾರಿ ವಿಪರೀತ ತಲೆ ನೋವು ಬರುತ್ತಿತ್ತು. ಚಿಕಿತ್ಸೆಗೆ ವೈದ್ಯರ ಬಳಿ ಹೋದಾಗ, ಮೈಗ್ರೇನ್ ಗೆ ಔಷಧ ನೀಡಿದ್ದರು. ಆದರೂ ತಲೆ ನೋವು ಕಡಿಮೆಯಾಗದಾಗ ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ಗಾಬರಿಯಾಗಿತ್ತು. ಆಕೆಯ ಮಿದುಳಲ್ಲಿ ಹುಳು ಕಾಣಿಸಿಕೊಂಡಿತ್ತು. ಮಾನವರ ಮಿದುಳಲ್ಲಿ ಹುಳು ಕಾಣಿಸಿಕೊಳ್ಳುವುದು ಇದೇ ಮೊದಲೇನಲ್ಲ. ಇದೊಂದು ರೋಗವಾಗಿದೆ.
ಆಫ್ರಿಕಾ, ಏಷ್ಯಾ, ಲ್ಯಾಟಿನ್ ಅಮೆರಿಕಾ ಭಾಗದಲ್ಲಿ ಇಂಥದ್ದೊಂದು ಕಾಯಿಲೆ ಇದೆ. ಅರೆ ಬೇಯಿಸಿದ ಹಂದಿಗಳ ಮಾಂಸ ತಿನ್ನುವುದರಿಂದ ಮಿದುಳಲ್ಲಿ ಟ್ಯಾಪ್ ವರ್ಮ್ ಬೆಳೆಯುವ ಈ ರೋಗ ಬರುತ್ತದೆ. ಮಾಂಸದಲ್ಲಿದ್ದ ಪಟ್ಟೆ ಹುಳುವಿನ ಮೊಟ್ಟೆಗಳು ಮಾನವನ ದೇಹ ಸೇರಿ ಮಿದುಳಿಗೆ ಹೋಗಿ ಬೆಳವಣಿಗೆಯಾಗುತ್ತವೆ. ಹಂತ, ಹಂತವಾಗಿ ಅವು ಬೆಳೆದು ಮಾನವನ ಜೀವ ಬಲಿ ಪಡೆಯುತ್ತವೆ. ಮಹಿಳೆ ಅಂಥ ಯಾವುದೇ ದೇಶಗಳಿಗೆ ಪ್ರಯಾಣ ಮಾಡಿಲ್ಲ. ಆದರೆ, ಆಕೆಗೆ ರೋಗ ಬಂದಿದ್ದು ಹೇಗೆ ಎಂಬುದು ಅಚ್ಚರಿಗೆ ಕಾರಣವಾಗಿದೆ. ಆ ಭಾಗದಿಂದ ವಲಸೆ ಬಂದಿರುವವರ ಸಂಪರ್ಕದಿಂದ ಮಹಿಳೆಗೂ ಇದು ಕಾಣಿಸಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.