ಚಿತ್ರವಿಚಿತ್ರ ಕಾರಣಕ್ಕೆಲ್ಲಾ ಕೋರ್ಟ್ ಮೆಟ್ಟಿಲೇರುವವರ ಬಗ್ಗೆ ಸಾಕಷ್ಟು ಓದಿದ್ದೇವೆ. ಇಂಥದ್ದೇ ಘಟನೆಯೊಂದರಲ್ಲಿ ತನ್ನ 16 ವರ್ಷದ ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಪರ್ಮಿಷನ್ ಕೊಟ್ಟ ಕಾರಣಕ್ಕೆ ವಿಚ್ಛೇದಿತ ಪತ್ನಿಯೊಬ್ಬರು ತಮ್ಮ ಮಾಜಿ ಪತಿ ವಿರುದ್ಧ ದಾವೆ ಹೂಡಿದ್ದಾರೆ.
ಸಿಡ್ನಿಯ ಪಿಕ್ಟನ್ ಸ್ಥಳೀಯ ಕೋರ್ಟ್‌ನಲ್ಲಿ ಈ ಸಂಬಂಧ ನಡೆದ ವಿಚಾರಣೆಯಲ್ಲಿ ಪ್ರತಿಕ್ರಿಯಿಸಿದ ಆ ಹುಡುಗಿಯ ತಂದೆ ಬ್ರಾಡ್ಲಿ ವಿಕ್ಟರಿ, ಟ್ಯಾಟೋ ಹಾಕಿಸಿಕೊಳ್ಳಲು ಅನುಮತಿ ನೀಡಿದ್ದರ ಹಿಂದೆ ತನ್ನ ಮಗಳಿಗೆ ಯಾವುದೇ ರೀತಿಯ ದೈಹಿಕ ಹಿಂಸೆ ನೀಡುವ ಉದ್ದೇಶ ಇರಲಿಲ್ಲ ಎಂದು ಬೇಡಿಕೊಳ್ಳುವ ಹಾಗೆ ಆಗಿದೆ.
“ಇದು ಅಕ್ಷಮ್ಯ……ಟ್ಯಾಟೋ ಹಾಕಿಸಿಕೊಳ್ಳುವುದು ನನ್ನ ವೈಯಕ್ತಿಕ ಇಚ್ಛೆಯಾಗಿದ್ದು, ಅದಕ್ಕೆ ಅನುಮತಿ ಕೇಳಿದಾಗ ಅಪ್ಪ ಹೂಂ ಎಂದಿದ್ದಾರೆ ಅಷ್ಟೇ” ಎಂದು ಖುದ್ದು ಮಗಳು ತನ್ನ ತಂದೆಯ ಪರವಾಗಿ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾಳೆ. ಅದೂ ಅಲ್ಲದೇ ಈ ಹುಡುಗಿ ತನ್ನ ತಾಯಿಯೊಂದಿಗೆ ಕಳೆದ ಮೂರು ವರ್ಷಗಳಿಂದ ಯಾವುದೇ ಸಂಪರ್ಕದಲ್ಲಿ ಇಲ್ಲವೆಂದು ತಿಳಿದುಬಂದಿದೆ. 18 ವರ್ಷದೊಳಗಿನ ಮಂದಿಗೆ, ಅವರ ಹೆತ್ತವರ ಲಿಖಿತ ಅನುಮತಿ ಇಲ್ಲದೇ ಟ್ಯಾಟೂ ಹಾಕಿಸಿಕೊಳ್ಳುವುದು ನ್ಯೂ ಸೌತ್ ವೇಲ್ಸ್‌ನಲ್ಲಿ ಕಾನೂನು ಬಾಹಿರವಾಗಿದೆ.
ವಿಚ್ಛೇದಿತ ಪತ್ನಿ ನಡೆನೆ ರೇವ್ಸ್ ಖಾಸಗಿಯಾಗಿ ಈ ವಿಚಾರಣೆ ನಡೆಯುವಂತೆ ಮಾಡಿದ್ದಾರೆ. ದೂರು ನೀಡಿದರೂ ಸಹ ಪೊಲೀಸರು ಚಾರ್ಜ್ ತೆಗೆದುಕೊಳ್ಳಲಿಲ್ಲವಾದಲ್ಲಿ ಹೀಗೆ ಖಾಸಗಿಯಾಗಿ ದಾವೆ ಹೂಡಲು ಆಸ್ಟ್ರೇಲಿಯಾದ ಕೋರ್ಟ್‌ಗಳಲ್ಲಿ ಅವಕಾಶವಿದೆ.