ಪೇಟೆಯಿಂದ ಕೊಂಡುಕೊಂಡು ಬಂದ ತರಕಾರಿಗಳಲ್ಲಿ ಹುಳುಗಳು ಕಾಣಿಸಿಕೊಳ್ಳೋದು ಕಾಮನ್. ಇದೇ ಕಾರಣಕ್ಕಾಗಿಯೇ ತರಕಾರಿಗಳನ್ನ ಬೆಚ್ಚನೆಯ ನೀರಿನಲ್ಲಿ ತೊಳೆದು ಬಳಕೆ ಮಾಡಬೇಕು ಅಂತಾ ಹೇಳಲಾಗುತ್ತೆ. ಆದರೆ ಒಂದು ವೇಳೆ ನೀವು ಕೊಂಡು ತಂದ ತರಕಾರಿಯಲ್ಲಿ ಹುಳು ಕಾಣಿಸಿಕೊಳ್ಳೋದ್ರ ಬದಲು ಹಾವು ಕಾಣಿಸಿಕೊಂಡರೆ ನಿಮ್ಮ ಕತೆ ಏನಾಗಬೇಡ…?
ಅಲೆಕ್ಸ್ ವೈಟ್ ಎಂಬವರು ಸಿಡ್ನಿಯ ಸೂಪರ್ ಮಾರ್ಕೆಟ್ನಿಂದ ಎಲೆಕೋಸನ್ನ ತಂದಿದ್ದರು. ಇದರಲ್ಲಿ ದೊಡ್ಡ ಹುಳುವೊಂದನ್ನ ಕಂಡ ಅಲೆಕ್ಸ್ ಹತ್ತಿರ ಹೋಗಿ ನೋಡಿದಾಗ ಅದು ಹುಳುವಲ್ಲ ಬದಲಾಗಿ ಹಾವು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ನಾನು ಅದರ ಹತ್ತಿರ ಹೋಗಿ ನೋಡಿದಾಗ ಅದು ತನ್ನ ಇಬ್ಭಾಗವಾಗಿದ್ದ ನಾಲಿಗೆಯನ್ನ ಪ್ರದರ್ಶಿಸಿತು. ಹುಳುಗಳಿಗೆ ನಾಲಿಗೆ ಇರೋದಿಲ್ಲ ಹೀಗಾಗಿ ಇದು ಹಾವು ಎಂದು ಖಚಿತವಾದಾಗ ನಾನು ಅಕ್ಷರಶಃ ಹೆದರಿ ಹೋಗಿದ್ದೆ ಎಂದು ಅಲೆಕ್ಸ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಟೂವಾಂಬಾ ಪ್ಯಾಕಿಂಗ್ ಪ್ಲಾಂಟ್ನಿಂದ ಸಿಡ್ನಿಗೆ ಬರೋಬ್ಬರಿ 870 ಕಿಲೋಮೀಟರ್ ದೂರ ಪ್ರಯಾಣ ಮಾಡಿದ ಈ ಹಾವು ಎಲೆಕೋಸಿನ ಪ್ಲಾಸ್ಟಿಕ್ ಹೊದಿಕೆಯೊಂದಿಗೆ ಸೇರಿ ಹೋಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೂಪರ್ ಮಾರ್ಕೆಟ್ನಿಂದ ಎಲೆಕೋಸನ್ನ ಕೊಂಡ ಅಲೆಕ್ಸ್ ಸೈಕಲ್ನಿಂದ ಅದನ್ನ ಮನೆಗೆ ತರುವವರೆಗೂ ಹಾವು ಅಲ್ಲೇ ಇತ್ತು. ಮನೆಯ ಟೇಬಲ್ ಮೇಲೆ ಎಲೆಕೋಸಿನ ಮೇಲಿನ ಪ್ಲಾಸ್ಟಿಕ್ ಹೊದಿಕೆಯನ್ನ ತೆಗೆದಾಗ ಈ ಹಾವು ಹೊರಬಂದಾಗ ಅಲೆಕ್ಸ್ ಹಾಗೂ ಆತನ ಪತ್ನಿ ಅಮಿಲಿಯಾ ಶಾಕ್ ಆಗಿದ್ರು.
ಹಾವು ಆ ಸ್ಥಳದಿಂದ ತಪ್ಪಿಸಿಕೊಳ್ಳಬಹುದು ಅಂತಾ ದಂಪತಿ ಎಲೆಕೋಸನ್ನ ಪ್ಲಾಸ್ಟಿಕ್ ಬಾಕ್ಸಿನೊಳಗೆ ಹಾಕಿದ್ದಾರೆ. ಬಳಿಕ ಉರಗ ತಜ್ಞರಿಗೆ ಕರೆ ಮಾಡಿದ್ದು ರಾತ್ರಿಯೊಳಗಾಗಿ ಆ ಹಾವನ್ನ ಅಲೆಕ್ಸ್ ನಿವಾಸದಿಂದ ಕೊಂಡೊಯ್ದಿದ್ದಾರೆ.