ಸಿಡ್ನಿ: ಕಲ್ಲುಗಳ ನಡುವೆ ಸಿಲುಕಿ ನೀರಿಗಿಳಿಯಲಾಗದೇ ಒದ್ದಾಡುತ್ತಿದ್ದ ಶಾರ್ಕ್ ಮೀನನ್ನು 11 ವರ್ಷದ ಬಾಲಕಿಯೊಬ್ಬಳು ಧೈರ್ಯದಿಂದ ಹಿಡಿದು ವಾಪಸ್ ನೀರಿಗೆ ಬಿಟ್ಟು ಪ್ರಾಣಿ ಪ್ರೀತಿ ಮೆರೆದಿದ್ದಾಳೆ.
ಆಸ್ಟ್ರೇಲಿಯಾದ ಹೋಬರ್ಟ್ ಟಾಸ್ಮೇನಿಯಾದ ಕಿಂಗ್ ಸ್ಟನ್ ಬೀಚ್ ನಲ್ಲಿ ಘಟನೆ ನಡೆದಿದೆ. ಬಿಲಿರಿಯಾ ಎಂಬ ಪುಟ್ಟ ಬಾಲಕಿ ತನ್ನ ಅಮ್ಮನ ಜತೆ ವಿಹಾರಕ್ಕೆ ಹೋಗಿದ್ದಳು. ಅಲ್ಲಿ ಆಕೆ ಮಾಡಿದ ಸಾಹಸದ ಕಾರ್ಯವನ್ನು ಆಕೆಯ ತಾಯಿ ವಿಡಿಯೋ ಶೂಟ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಬಾಲಕಿಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾರ್ಕ್ ಎಂದರೆ ಈಜುಗಾರರ ಮೇಲೆ ದಾಳಿ ನಡೆಸುವವು ಎಂಬ ಭಯ ಎಲ್ಲರಲ್ಲಿದೆ. ಆದರೆ, ಬಾಲಕಿ ಯಾವುದೇ ಭಯವಿಲ್ಲದೇ ಮೀನನ್ನು ಕೈಯ್ಯಲ್ಲಿ ಹಿಡಿದು ಸಮುದ್ರಕ್ಕೆ ಬಿಟ್ಟಿದ್ದಾಳೆ. ಡ್ರಾಟ್ ಬೋರ್ಡ್ ಶಾರ್ಕ್ ಎಂಬ ಹೆಸರಿನ ಈ ಮೀನು ಸಮುದ್ರದ ಉಬ್ಬರದ ಸಮಯದಲ್ಲಿ ಬಂದು ಕಲ್ಲುಗಳ ನಡುವೆ ಸಿಲುಕಿತ್ತು. ವಾಪಸ್ ಸಮುದ್ರಕ್ಕೆ ತೆರಳಲಾರದೇ ಒದ್ದಾಡುತ್ತಿತ್ತು. ಕೆಲ ಹೊತ್ತು ಇಲ್ಲೇ ಇದ್ದರೆ ಜೀವಕ್ಕೆ ಅಪಾಯವಿತ್ತು.