ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಹೇಳಿದ ಪೊಲೀಸರ ಜುಟ್ಟು ಹಿಡಿದು ಬಡಿದ ಪ್ರಸಂಗ ನಡೆದಿದೆ. ಆಸ್ಟ್ರೇಲಿಯಾದ ಆಗ್ನೇಯ ಮೆಲ್ಬೋರ್ನ್ ನಲ್ಲಿ ಘಟನೆ ನಡೆದಿದ್ದು, ಗಾಯಗೊಂಡಿರುವ ಪೊಲೀಸರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಮಾಸ್ಕ್ ಧರಿಸದೆ ಕೊರೊನಾ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಮಹಿಳೆ ವಿರುದ್ಧ ದೂರು ದಾಖಲಾಗಿದೆ.
ಫ್ರಾಂಕಸ್ಟನ್ ಎಂಬಲ್ಲಿ ಮಾಲ್ ಒಂದರ ಮುಂದೆ 38 ವರ್ಷದ ಮಹಿಳೆ ಮಾಸ್ಕ್ ಧರಿಸದೆ ನಿಂತಿದ್ದಳು. ಸಾಲದ್ದಕ್ಕೆ ಸರದಿ ಸಾಲಿನಲ್ಲೂ ಇರಲಿಲ್ಲ.
ಇದೇ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ಪೈಕಿ 26 ವರ್ಷದ ಪೇದೆಯೊಬ್ಬರು ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೇ ಜಗಳ ತೆಗೆದ ಮಹಿಳೆ, ಪೊಲೀಸರ ಜುಟ್ಟು ಹಿಡಿದು ಅಲ್ಲಿದ್ದ ಕಾಂಕ್ರೀಟ್ ಗೆ ತಲೆಯನ್ನು ಹಲವು ಬಾರಿ ಬಡಿಸಿ ಗಾಯಗೊಳಿಸಿದ್ದು, ಬಿಡಿಸಲು ಹೋದ ಉಳಿದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾಳೆ.
ಗಾಯಾಳು ಪೊಲೀಸರು ಆಸ್ಪತ್ರೆಯಲ್ಲಿದ್ದು, ಮಹಿಳೆಯ ವಿರುದ್ಧ ದೂರು ದಾಖಲಿಸಿರುವ ಪೊಲೀಸರು, 200 ಡಾಲರ್ (15 ಸಾವಿರ ರೂ.) ದಂಡ ವಿಧಿಸಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು, ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಬೇಕಿರುತ್ತದೆ. ಕಾನೂನಿಗಿಂತ ಮೀರಿದವರು ಎಂದು ಯಾರಾದರು ಭಾವಿಸಿದ್ದರೆ, ಮಾಸ್ಕ್ ಧರಿಸದೆ ಓಡಾಡಿದರೆ ಅಂತಹವರ ವಿರುದ್ಧ ಕ್ರಮ ಖಚಿತ ಎಂದು ಪೊಲೀಸರು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.