ಸಮೊಸಾ, ಮಾವಿನ ಕಾಯಿ ಚಟ್ನಿ ಮಾಡಿ ಟ್ವಿಟರ್ ನಲ್ಲಿ “ಸ್ಕೊಮೊಸಾ” ಎಂದು ಬರೆದು ಫೋಟೋ ಹಾಕಿ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಇದನ್ನು ಹಂಚಿಕೊಳ್ಳಬಯಸುತ್ತೇನೆ ಎಂದಿದ್ದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರ್ರಿಸನ್ ಈಗ ಗುಜರಾತಿ ಖಡಿ ಬಗ್ಗೆ ಮಾತನಾಡಿದ್ದಾರೆ.
ಗುರುವಾರ ವಿಡಿಯೋ ಸಂವಾದದಲ್ಲಿ ಮೋದಿ ಅವರ ಜತೆ ಮಾತನಾಡಿದ ಸಂದರ್ಭದಲ್ಲಿ, “ಮೋದಿ ಅವರ ಪ್ರಸಿದ್ಧ ಅಪ್ಪುಗೆಗೆ ನಾನು ಅಲ್ಲಿದ್ದೆ. ವಾರಾಂತ್ಯದಲ್ಲಿ ಸಮೋಸಾ ಸವಿಯುವಲ್ಲಿ ಇಬ್ಬರೂ ಖುಷಿಪಟ್ಟೆವು” ಎಂದು ತಮಾಷೆ ಮಾಡಿದ್ದಾರೆ. “ಮುಂದಿನ ಬಾರಿ ನಿಮ್ಮನ್ನು ಭೇಟಿಯಾಗುವ ಪೂರ್ವದಲ್ಲಿ ನೀವೇ ಹೇಳಿದಂತೆ ನಿಮ್ಮ ಇಷ್ಟದ ಗುಜರಾತಿ ಖಡಿ, ಕಿಚಡಿಯನ್ನು ನನ್ನ ಅಡುಗೆ ಮನೆಯಲ್ಲಿ ಮಾಡುತ್ತೇನೆ” ಎಂದು ಮೋದಿ ಅವರಿಗೆ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಇದನ್ನು ಕೇಳಿ ಗುಜರಾತಿಗರು ತುಂಬಾ ಖುಷಿಯಾಗುತ್ತಾರೆ. ಕಿಚಡಿ ಇಡೀ ದೇಶದ ಜನ ಸೇವಿಸುತ್ತಾರೆ. ಅದಕ್ಕೆ ವಿವಿಧ ಊರುಗಳಲ್ಲಿ ವಿವಿಧ ಹೆಸರಿದೆ ಎಂದಿದ್ದಾರೆ.
ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸುವ ಬಗ್ಗೆ ಗುರುವಾರದ ವಿಡಿಯೋಟ್ರಾನಿಕ್ಸ್ ಸಭೆಯಲ್ಲಿ ಚರ್ಚಿಸಲಾಯಿತು. ಭಾರತ, ಆಸ್ಟ್ರೇಲಿಯಾ ಹಿಂದು ಮಹಾ ಸಾಗರದಿಂದ ಜೋಡಿಸಿಕೊಂಡಿದೆ. ಇದರಿಂದ ಎರಡೂ ರಾಷ್ಟ್ರಗಳು ಸಹೋದರರಿದ್ದಂತೆ ಎಂದು ಮೋದಿ ಹೇಳಿದರು.
ಸ್ಪಂದನ ಶೀಲ ಪ್ರಜಾಪ್ರಭುತ್ವ ಹೊಂದಿರುವ ಭಾರತ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ಕಾಮನ್ವೆಲ್ತ್ ನಿಂದ ಹಿಡಿದು ಕ್ರಿಕೆಟ್ ವರೆಗೆ ಆಪ್ತವಾಗಿವೆ ಎಂದು ಸಭೆಗೂ ಮುಂಚೆ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.