ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನಯಾನಿಯ ಕೈಗನ್ನಡಿ ಕಳೆದುಹೋಗಿದೆ.
ಬಾಹ್ಯಾಕಾಶದ ಕೇಂದ್ರದ ಬ್ಯಾಟರಿ ಬದಲಾಯಿಸುವ ಕಾರ್ಯ ನಡೆಯಿತ್ತಿದ್ದಾಗ ಕ್ರಿಸ್ ಕ್ಯಾಸಡಿ ಕೈಗನ್ನಡಿ ಕಳಚಿ ಬಿದ್ದಿದೆ.
ನೈಕಲ್ ಹೈಡ್ರೋಜನ್ ಬ್ಯಾಟರಿ ಬದಲು ಲೀಥಿಯಂ ಅಯೋನ್ ಬ್ಯಾಟರಿ ಅಳವಡಿಸುವ ಕಾರ್ಯ ನಡೆಯುತ್ತಿತ್ತು. 2017 ರಿಂದ ಈ ಕಾರ್ಯ ನಡೆಯುತ್ತಿದ್ದು, ಇದುವರೆಗೆ 18 ಲೀಥಿಯಂ ಅಯೋನ್ ಬ್ಯಾಟರಿಗಳನ್ನು ಅಳವಡಿಸಲಾಗಿದೆ.
ಇದೀಗ ಕ್ಯಾಸಡಿ ಮತ್ತು ಬೆಹ್ನಕೆನ್ ಸೇರಿ 6 ಬ್ಯಾಟರಿಗಳನ್ನು ಬದಲಿಸಿದ್ದರು. 7 ನೇ ಬಾರಿಗೆ ಬಾಹ್ಯಾಕಾಶ ನಡಿಗೆ ಕೈಗೊಂಡಿರುವ ಇಬ್ಬರೂ 30 ಕ್ಕೂ ಹೆಚ್ಚು ಗಂಟೆಗಳ ಕಾಲ ನಿರ್ವಾತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರಿಸ್ ಕ್ಯಾಸಡಿಯ ಸ್ಪೇಸ್ ಸೂಟ್ ನ ಎರಡೂ ಕೈಗಳಿಗೆ ಅಳವಡಿಸಿದ್ದ ಕೈಗನ್ನಡಿಯು ಕಳಚಿಹೋಗಿದೆ. ವಾಹನಗಳಿಗೆ ಕನ್ನಡಿ ಇದ್ದ ಹಾಗೆ, ಸ್ಪೇಸ್ ಸೂಟ್ ಗೂ ಕನ್ನಡಿ ಇರುತ್ತದೆ. ಬಾಹ್ಯಾಕಾಶದಲ್ಲಿ ನಡೆದಾಡುವಾಗ ಅದನ್ನು ನೋಡಿಕೊಳ್ಳುತ್ತಾ ಸಾಗಬೇಕಿರುತ್ತದೆ.
ಆದರೆ, ಒಂದು ಕನ್ನಡಿ ಕಳೆದು ಹೋಗಿದ್ದು, ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದರಿಂದ ಬಾಹ್ಯಾಕಾಶ ನಡಿಗೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಕ್ಯಾಸಡಿ ಸ್ಪಷ್ಟನೆ ನೀಡಿದ್ದಾರೆ. ಜುಲೈ ತಿಂಗಳಲ್ಲೂ ಬಾಹ್ಯಾಕಾಶ ನಡಿಗೆ ಮುಂದುವರಿಯಲಿದ್ದು, ಆಗಸ್ಟ್ ತಿಂಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.