ಒಕ್ಲಹೋಮಾ: ಡೆಡ್ಲಿ ಕೊರೋನಾ ವೈರಸ್ ನಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಕೆಲವರು ಮಾಸ್ಕ್ ಧರಿಸದೇ ಪರಸ್ಪರ ಅಂತರ ಕಾಯ್ದುಕೊಳ್ಳದೇ ಉದ್ಧಟತನವೆಸಗಿ ತಾವೂ ಸಂಕಷ್ಟಕ್ಕೆ ಒಳಗಾಗುವ ಜೊತೆಗೆ ಇನ್ನೊಬ್ಬರನ್ನೂ ಕಷ್ಟಕ್ಕೆ ಸಿಲುಕಿಸುವ ಪ್ರಸಂಗಗಳು ಆಗಾಗ ನಡೆಯುತ್ತಿರುತ್ತವೆ.
ಅಮೆರಿಕಾದ ಒಕ್ಲಹೋಮಾ ನಗರದಲ್ಲಿ ಜುಲೈ 8 ರಂದು ಇಂಥದ್ದೊಂದು ಘಟನೆ ನಡೆದಿದೆ. ಸ್ಕೇಚರ್ಸ್ ಎಂಬ ಶೂ ಅಂಗಡಿಗೆ ಬಂದ ಮಹಿಳೆಯೊಬ್ಬಳಿಗೆ ಅಂಗಡಿಯವರು ಮಾಸ್ಕ್ ಧರಿಸಿ ಎಂದು ಹೇಳಿದ್ದಕ್ಕೆ ಆಕೆ ಸಿಟ್ಟಾಗಿದ್ದಾಳೆ.
ಮಾತ್ರವಲ್ಲ ಶೂ ಶೋರೂಂನ ಸಿಬ್ಬಂದಿ ಮೇಲೆ ಅಲ್ಲೇ ಇದ್ದ ಎರಡು ಶೂ ಬಾಕ್ಸ್ ಗಳನ್ನು ಎಸೆದು ಸಿಟ್ಟು ಮಾಡಿಕೊಂಡು ದಡಬಡಾಯಿಸಿಕೊಂಡು ವಾಪಸ್ ಹೋಗಿದ್ದಾರೆ. ಇದನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಮಹಿಳೆ ಬಾಕ್ಸ್ ಎಸೆದು ಹೋಗುವ ಹಾಗೂ “ಇದು ಹಲ್ಲೆಯಾಗಿದೆ. ನಿಮ್ಮ ಲೈಸನ್ಸ್ ನಂಬರ್ ಏನು” ಎಂದು ಶೋರೂಂ ಸಿಬ್ಬಂದಿ ಹೇಳುವುದು ವಿಡಿಯೋದಲ್ಲಿ ಚಿತ್ರಿತವಾಗಿದೆ. ಆದರೆ, ಮಹಿಳೆ ಸಿಟ್ಟಿನಲ್ಲಿ ತೆರಳುವಾಗ ತನ್ನ ಪರ್ಸ್ ಮರೆತು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಶೋ ರೂಂ ಸಿಬ್ಬಂದಿ ಮಹಿಳೆಯ ಪರ್ಸ್ ಅನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಪೊಲೀಸರು ಪರ್ಸ್ ನಲ್ಲಿದ್ದ ಗುರುತಿನ ಚೀಟಿ ಸಹಾಯದಿಂದ ಆಕೆಯನ್ನು ಗುರುತಿಸಿದ್ದಾರೆ.