ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಒಂದು ಕಡೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ ಮತ್ತೊಂದೆಡೆ ಅನಾಮಿಕ ವ್ಯಕ್ತಿಯೊಬ್ಬರು ಬಿಡೆನ್ ರ ದಿವಂಗತ ಪುತ್ರ ಬ್ಯೂ ಅವರ ಸಮಾಧಿ ಮುಂದೆ ಕುಳಿತಿರುವ ಚಿತ್ರವೊಂದು ಸುದ್ದಿ ಮಾಡಿದೆ.
ವಾಷಿಂಗ್ಟನ್‌ನ ಕ್ಯಾಪಿಟೋಲ್ ಕಾಂಪ್ಲೆಕ್ಸ್‌ನಿಂದ ಬಿಡೆನ್‌ರ ಪ್ರಮಾಣವಚನ ಸಮಾರಂಭವು ನೇರ ಪ್ರಸಾರವಾಗುತ್ತಿದ್ದರೆ, ದೂರದ ಡೆಲ್ವಾರ್ ನ ಗ್ರೀನ್‌ವಿಲ್ಲೆಯ ಬ್ರಾಂಡಿವೈನ್ ಚರ್ಚ್ ಬಳಿ ಇರುವ ಅವರ ಪುತ್ರನ ಸಮಾಧಿಯ ಬಳಿ ಸಮವಸ್ತ್ರಧಾರಿ ವ್ಯಕ್ತಿಯೊಬ್ಬರು ಆತನ ನೆನಪುಗಳನ್ನು ಚಿರವಾಗಿಡಲು ನೋಡುತ್ತಿದ್ದರು.
ಡೆಲ್ವಾರ್ ನ್ಯಾಷನಲ್ ಗಾರ್ಡ್‌ನ ಸಿಬ್ಬಂದಿಯ ಪೈಕಿಯಾಗಿದ್ದ ಬ್ಯೂ, ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ, ತಮ್ಮ 46ನೇ ವಯಸ್ಸಿನಲ್ಲಿ ಬ್ಯೂ ಮೆದುಳು ಕ್ಯಾನ್ಸರ್‌ಗೆ ಬಲಿಯಾಗಿದ್ದರು. ತಮ್ಮ ಹಿರಿಯ ಪುತ್ರನ ಅಗಲಿಕೆಯಿಂದಾಗಿಯೇ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಸ್ಪರ್ಧಿ ಸಲಿಲ್ಲ ಎಂದು ಜೋ ಹೇಳಿಕೊಂಡಿದ್ದರು. ಅಮೆರಿಕದ 46ನೇ ಅಧ್ಯಕ್ಷರಾಗಿ ತಾವು ಪ್ರಮಾಣ ವಚನ ಸ್ವೀಕರಿಸಲು ಮುಂದಾದ ಆ ಕ್ಷಣಗಳನ್ನು ನೋಡಲು ಬ್ಯೂ ಇಲ್ಲವೆಂಬ ನೋವನ್ನು 78 ವರ್ಷ ವಯಸ್ಸಿನ ಬಿಡೆನ್ ಮಂಗಳವಾರ ಸಂಜೆ ತೋಡಿಕೊಂಡಿದ್ದರು.