ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಮನೆಗಳಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿಯಲ್ಲಿ ಬಹಳಷ್ಟು ಜನರು ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ, ಆನ್ಲೈನ್ ಕಾಲ್ಗಳ ಮೂಲಕ ಕೆಲಸ ಸಂಬಂಧ ಮೀಟಿಂಗ್ ಮಾಡುವ ವೇಳೆಯೂ ತಮ್ಮ ಕಾಮನೆಗಳನ್ನು ಹತ್ತಿಕ್ಕಿಕೊಳ್ಳಲು ಆಗದೇ ರೆಡ್ಹ್ಯಾಂಡ್ ಆಗಿ ಸಿಕ್ಕಿಕೊಂಡಿರುವ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ.
ಅರ್ಜೆಂಟೀನಾದ ಜನಪ್ರತಿನಿಧಿಯೊಬ್ಬರು ತಮ್ಮ ದೇಶದ ಕಾಂಗ್ರೆಸ್ಸಿನ ಕೆಳಮನೆಯ ಆನ್ಲೈನ್ ಸಭೆಯೊಂದರ ವೇಳೆ, ತಮ್ಮ ಪಾರ್ಟ್ನರ್ ಜೊತೆಗೆ ಡಿಂಗ್ ಡಾಂಗ್ ಮಾಡುತ್ತಾ ಸಿಕ್ಕಿಕೊಂಡಿದ್ದಾರೆ. ಆಡಳಿತಾರೂಢ ಪೆರೋನಿಸ್ಟ್ ಪಕ್ಷದ ಜುವಾನ್ ಎಮಿಲಿಯೂ ಅಮೆರಿ, ಲೈವ್ ವಿಡಿಯೋ ಕಾಲ್ನಲ್ಲಿ ಇರುವ ವೇಳೆಯೇ ತಮ್ಮ ಸಂಗಾತಿಯೊಂದಿಗೆ ಆಳವಾದ ಚುಂಬನದಲ್ಲಿ ಭಾಗಿಯಾಗಿರುವ ದೃಶ್ಯವೊಂದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಅಮೆರಿರ ಈ ’ಅತಿ ಆತುರ’ ಅವರಿಗೆ ಸಂಕಷ್ಟ ತಂದಿಟ್ಟಿದೆ. ಅವರ ತಲೆದಂಡಕ್ಕೆ ಒತ್ತಾಯಿಸಿದ ಸಭಾಧ್ಯಕ್ಷ ಸೆರ್ಜಿಯೋ ಮಸ್ಸಾ, ಅಮೇರಿರನ್ನು ಅವರ ಹುದ್ದೆಯಿಂದ ವಜಾಗೊಳಿಸಲು ಸಮಿತಿಯೊಂದನ್ನು ರಚಿಸಿದ್ದರು. ಇದೀಗ ಅಮೇರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಆ ವೇಳೆಯಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲವೆಂದು ತಿಳಿದು ಹಾಗೆ ಮಾಡಿದ್ದಾಗಿ ಹೇಳಿಕೊಂಡ ಅಮೇರಿ, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಮತ್ತೆ ಕಾಲ್ಗೆ ಕನೆಕ್ಟ್ ಆಗಿದ್ದೆ ಎಂದು ಹೇಳಿದ್ದಾರೆ.