ಬ್ರಿಸ್ಬೇನ್: ಮನೆಗೆ ಬೆಂಕಿ ಬಿದ್ದ ಬಗ್ಗೆ ಗಿಳಿಯೊಂದು ತನ್ನ ಯಜಮಾನನನ್ನು ಎಚ್ಚರಿಸಿ ಭಾರಿ ಅನಾಹುತ ತಪ್ಪಿಸಿದ ಅಪರೂಪದ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಕಾಂಗರೂ ಪೋಂಯ್ಟ್ ನ ಸೆಲ್ ಸ್ಟೋನ್ ಸ್ಟ್ರೀಟ್‌ನಲ್ಲಿ ಸಂಭವಿಸಿದೆ.
ಅಂತೋನ್ ಗ್ನೂಯೆನ್ ಎಂಬವರು ಎರ್ರಿ ಎಂಬ ಗಿಳಿ ಸಾಕಿದ್ದರು. ಒಂದು ದಿನ ಅವರು ನಿದ್ರೆ ಮಾಡಿದಾಗ ಗಿಳಿ ಅಂತೋನ್…ಅಂತೋನ್…..ಎಂದು ಕರೆದು ಎಚ್ಚರಿಸಿತ್ತು. ‘ಗಿಳಿ ಎಚ್ಚರಿಸುತ್ತಿದ್ದಂತೆ ಎದ್ದು ನೋಡಿದರೆ, ಸುಟ್ಟ ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ ನಾನು ಹೊರ ಹೋಗಿ ನೋಡಿದೆ. ಅಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿತು.
ಕಟ್ಟಡಕ್ಕೆ ಫೈರ್ ಅಲಾರ್ಮ್ ಅಳವಡಿಸಿದ್ದರೂ ಅದಿನ್ನೂ ಸದ್ದು ಮಾಡಿರಲಿಲ್ಲ. ಅದಕ್ಕೂ ಮುಂಚೆ ಗಿಳಿ ಎಚ್ಚರಿಸಿತು. ನಾನು ಗಿಳಿಯೊಡನೆ ಸುರಕ್ಷಿತ ಸ್ಥಳಕ್ಕೆ ತೆರಳಲು ಹಾಗೂ ಮನೆಯ ಭಾಗವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಅಂತೋನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
‘ಗಿಳಿ ಸಕಾಲದಲ್ಲಿ ಎಚ್ಚರಿಸದೇ ಇದ್ದರೆ ದೊಡ್ಡ ಅಪಾಯ ಸಂಭವಿಸುತ್ತಿತ್ತು. ನಿಜವಾಗಿ ಗಿಳಿಯೇ ಮಾಲೀಕನ ಜೀವ ಉಳಿಸಿದೆ. ಬೆಂಕಿ ಕೆನ್ನಾಲಿಗೆ ಇಡೀ ಮನೆ ಆವರಿಸುವುದನ್ನು ತಪ್ಪಿಸಲು ಸಾಧ್ಯವಾಯಿತು’ ಎಂದು ಕ್ವೀನ್ಸ್‌ಲ್ಯಾಂಡ್‌ನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಇನ್ಸ್‌ಪೆಕ್ಟರ್ ಕ್ಯಾಮ್ ಥಾಮಸ್ ಹೇಳಿದ್ದಾರೆ.