ಭಾರತೀಯ ಮೂಲದ ಐರಿಶ್ ವ್ಯಕ್ತಿಯೊಬ್ಬರು ಭೂಮಿಯ ಸುತ್ತಳತೆಗೆ ಸಮನಾಗಿ ನಡೆಯುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಹೀಗಾಗಿ ಗಿನ್ನೆಸ್ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಆದರೆ ವಿಚಿತ್ರ ಅಂದರೆ ಇವರು ಭೂಮಿಯ ಸುತ್ತ ಎಂದಿಗೂ ನಡೆದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ 70 ವರ್ಷದ ವಿನೋದ್ ಬಜಾಜ್ ಐರಿಶ್ ನಗರವಾದ ಲಿಮೆರಿಕ್ನಲ್ಲಿ 40,075 ಕಿಲೋಮೀಟರ್ ನಡೆದಿದ್ದಾರೆ.
ಈ ದೂರವು ಭೂಮಿಯ ಸುತ್ತಳತೆಗೆ ಸಮನಾಗಿದೆ. ನಿವೃತ್ತ ವ್ಯಾಪಾರ ಸಲಹೆಗಾರ ಭಾರತದಲ್ಲಿ ಜನಿಸಿದ್ದು ಐರ್ಲೆಂಡ್ನಲ್ಲಿ 43 ವರ್ಷಗಳಿಂದ ವಾಸ್ತವ್ಯ ಹೂಡಿದ್ದಾರೆ.
ಸೆಪ್ಟೆಂಬರ್ನಲ್ಲಿ 8322 ಗಂಟೆಗಳಲ್ಲಿ 54.6 ದಶಲಕ್ಷಕ್ಕೂ ಹೆಚ್ಚಿನ ಹೆಜ್ಜೆಗಳನ್ನ ಪೂರ್ಣಗೊಳಿಸಿದ ನಂತರ ಒಂದು ಮಿಲಿಯನ್ಗೂ ಹೆಚ್ಚು ಕ್ಯಾಲೋರಿ ಕರಗಿಸಿದ್ದಾರೆ. ಈ ವೇಳೆಗೆ ಅವರು 40,075 ಕಿಲೋಮೀಟರ್ ವ್ಯಾಪ್ತಿಯನ್ನ ಪೂರ್ಣಗೊಳಿಸಿದ್ದಾರೆ.
2016ರಲ್ಲಿ ತೂಕ ಇಳಿಸುವ ಇರಾದೆಯಿಂದ ಬಜಾಜ್ ವಾಕ್ ಮಾಡಲು ಆರಂಭಿಸಿದರು. ತಮ್ಮ ನಡಿಗೆಯನ್ನ ಲೆಕ್ಕದಲ್ಲಿಟ್ಟುಕೊಳ್ಳಲು ಬಜಾಜ್ ಮೊಬೈಲ್ ಟ್ರ್ಯಾಕರ್ ಬಳಕೆ ಮಾಡಿದ್ದಾರೆ.