ಬಹಳ ದೀರ್ಘವಾದ ಕ್ರಿಸ್‌ಮಸ್ ಆಚರಣೆ ಮಾಡುವ ಫಿಲಿಪ್ಪೀನ್ಸ್, ಪ್ರತಿ ವರ್ಷ ಸೆಪ್ಟೆಂಬರ್‌ನಿಂದಲೇ ಹಬ್ಬದ ಮೂಡ್‌ಗೆ ಬಂದುಬಿಡುತ್ತದೆ. ಆದರೆ ಈ ವರ್ಷ ಕೋವಿಡ್-19 ಲಾಕ್‌ಡೌನ್ ಇರುವ ಕಾರಣ ನಾಲ್ಕು ತಿಂಗಳ ಆಚರಣೆಗೆ ಕಡಿವಾಣ ಬಿದ್ದಂತಾಗಿದೆ.
ಆದರೂ ಸಹ ತಮ್ಮ ಹಬ್ಬದ ಆಚಣೆಯನ್ನು ಕಸಿದುಕೊಳ್ಳಲು ವೈರಸ್‌ಗೆ ಅವಕಾಶ ಕೊಡಬಾರದು ಎಂದು ಫಿಲಿಪ್ಪೀನ್ಸ್ ಜನತೆ ದೃಢವಾಗಿ ನಿಶ್ಚಯಿಸಿದಂತೆ ಕಾಣುತ್ತಿದೆ.
“ಕೋವಿಡ್ ಇರಲಿ ಇಲ್ಲದೇ ಇರಲಿ, ಏನೇ ಆದರೂ ಸಹ ಈ ವರ್ಷವೂ ಫಿಲಿಪ್ಪಿನೋ ಸಂಪ್ರದಾಯದಂತೆ ಕ್ರಿಸ್‌ಮಸ್ ಆಚರಿಸಲಿದ್ದೇವೆ” ಎಂದು ಮಾಸ್ಕ್ ಧರಿಸಿಕೊಂಡೇ ಹಬ್ಬ ಆಚರಿಸಲು ನಿರ್ಧರಿಸಿರುವ ಸೆಸಿಲಾ ಮೂರ್ ತಿಳಿಸಿದ್ದಾರೆ.
ತೈಲದ ಟ್ಯಾಂಕರ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂರ್ ಪತಿ ತಾತ್ಕಾಲಿಕವಾಗಿ ಕೆಲಸ ಕಳೆದುಕೊಂಡಿದ್ದು, ಕುಟುಂಬದ ಆರ್ಥಿಕ ನಿರ್ವಹಣೆಗೆ ತೊಂದರೆಯಾಗಿದೆ. ಆದರೂ ಸಹ ಫಿಲಿಪ್ಪಿನೋ ಸ್ಟೈಲ್‌ನಲ್ಲಿ ಹಬ್ಬ ಮಾಡಿಯೇ ತೀರುವ ಪಣವನ್ನು ಕುಟುಂಬ ತೊಟ್ಟಿದೆ.