ಈ ಮಲಬಾಧೆ ಅನ್ನೋದು ಯಾರನ್ನೂ ಬಿಡೋದಿಲ್ಲ ನೋಡಿ. ಅದರಲ್ಲೋ ಕೆಲವೊಮ್ಮೆ ಎಲ್ಲೆಂದರಲ್ಲಿ, ಯಾವಾಗ ಅಂದ್ರೆ ಆವಾಗ ಬಾಧಿಸಲು ಆರಂಭಿಸಿಬಿಟ್ಟರಂತೂ ಭಾರೀ ಹಿಂಸೆ ಆಗಿಬಿಡುತ್ತದೆ.
ಡೆಲಿವರಿ ಬಾಯ್ ಒಬ್ಬ ಆರ್ಡರ್ ಅನ್ನು ಗ್ರಾಹಕರಿಗೆ ಡೆಲಿವರಿ ಮಾಡಿದ ಬೆನ್ನಿಗೇ ಅವರ ಮನೆಯಂಗಳದಲ್ಲೇ ಮಲಬಾಧೆ ತೀರಿಸಿಕೊಂಡ ದೃಶ್ಯವೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಬಿಟ್ಟಿದೆ.
ಮ್ಯಾಂಚೆಸ್ಟರ್‌ನ ಡೆರೆನ್ ಪಾಸ್‌ಮನ್ ಹೆಸರಿನ ಈ ವ್ಯಕ್ತಿ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಡಿಸೆಂಬರ್ 11ರಂದು ಮೂರು ವಸ್ತುಗಳನ್ನು ಅಮೆಜಾನ್‌ನಲ್ಲಿ ಬುಕ್ ಮಾಡಿದ್ದರು. ಆ ವಸ್ತುಗಳು ಮಾರನೇ ದಿನ ಡೆಲಿವರಿ ಆಗುವ ವೇಳೆ ಆತನ ಮನೆಯಲ್ಲಿ ಈ ಘಟನೆ ಜರುಗಿದೆ. ಕೊನೆಗೆ ಖುದ್ದು ಡೆರೆನ್ ಜೆಟ್ ವಾಶರ್ ಬಳಸಿ ಎಲ್ಲವನ್ನೂ ಕ್ಲೀನ್ ಮಾಡಬೇಕಾಯಿತು.
ಈ ಬಗ್ಗೆ ಇ-ಕಾಮರ್ಸ್ ದೈತ್ಯ ಅಮೆಜಾನ್‌ಗೆ ದೂರು ಕೊಟ್ಟಿರುವ ಡೆರೆನ್‌ಗೆ 150 ಪೌಂಡ್‌ಗಳ ಕ್ರಿಸ್ಮಸ್ ಹ್ಯಾಂಪರ್ ಜೊತೆಗೆ, ಪ್ರೈಮ್ ಟಿವಿಯ ಒಂದು ವರ್ಷದ ಚಂದಾವನ್ನು ಉಚಿತವಾಗಿ ಕೊಡಲಾಗಿದೆ. ಜೊತೆಗೆ ತನ್ನ ಮನೆಯನ್ನು ಸ್ವಚ್ಛಗೊಳಿಸಲು ಕ್ಲೀನರ್ ಒಬ್ಬರನ್ನು ಕಳುಹಿಸಿಕೊಡುವುದಾಗಿಯೂ ಅಮೆಜಾನ್ ತಿಳಿಸಿದ್ದಾಗಿ ಡೆರೆನ್ ಹೇಳಿದ್ದಾರೆ. ದೂರು ನೀಡಲು ಮೊದಲು ಕಾಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರದೇ ಇದ್ದ ವೇಳೆ ಡೆರೆನ್ ಇ-ಮೇಲ್ ಮುಖಾಂತರ ನಡೆದ ಘಟನೆಯನ್ನು ವಿವರಿಸಿದ್ದರು.