ವಾರ್ಸಾ: ಪೋಲೆಂಡ್ ಅಧ್ಯಕ್ಷ ಅಂಡ್ರಜೆಜ್ ಡುಡಾ ಅವರ ವಿರುದ್ಧ ವಿರೋಧ ಪಕ್ಷದ ಮಹಿಳಾ ಎಂಪಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾ ಆ್ಯಂಡ್ ಜಸ್ಟಿಸ್ ಪಕ್ಷಕ್ಕೆ ಸೇರಿದ ಡುಡಾ, ತೃತೀಯ ಲಿಂಗಿ (LGBTQ) ಬಗ್ಗೆ ತಮ್ಮ ಚುನಾವಣಾ ಪ್ರಚಾರದ ವೇಳೆ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಲೆಸ್ಬಿಯನ್ ಗಳು, ಗೇಗಳು, ಅನ್ಯಲಿಂಗಿಗಳು, ತೃತೀಯ ಲಿಂಗಿಗಳು ಸಮುದಾಯದ ಜನರಲ್ಲ. ಅದೊಂದು ಸಿದ್ಧಾಂತ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ಅದರಲ್ಲೂ ವಿರೋಧ ಪಕ್ಷದಿಂದ ಅವರ ಹೇಳಿಕೆ ಬಗ್ಗೆ ಅಸಮಾಧಾನ ಕೇಳಿ ಬಂದಿತ್ತು.
LGBTQ ಸಮುದಾಯದ ಬೆಂಬಲಕ್ಕೆ ನಾವಿದ್ದೇವೆ ಎಂದು ತೋರಿಸಿಕೊಳ್ಳಲು ವಿರೋಧ ಪಕ್ಷದ 10 ಮಹಿಳಾ ಎಂಪಿಗಳು ಕಾಮನ ಬಿಲ್ಲಿನ ಸ್ವರೂಪದ ಏಳು ಬಣ್ಣಗಳ ಬಟ್ಟೆ ತೊಟ್ಟು ಅಸಮಾಧಾನವನ್ನು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ.
“ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಇನ್ನು ಮುಂದೆ ಇಂಥಹ ಸನ್ನಿವೇಶ ಬರಬಾರದು ಎಂದು ಅಧ್ಯಕ್ಷರಿಗೆ ಎಚ್ಚರಿಸಲು ಬಯಸುತ್ತೇವೆ” ಎಂದು ಮಹಿಳಾ ಎಂಪಿ ಮಾರಿಯಾ ಜುಕೋವಸ್ಕಾ ಹೇಳಿದ್ದಾರೆ.