ನಮ್ಮಲ್ಲಿ ’ಚಾಯ್ ಪೇ ಚರ್ಚಾ’ ಹೆಸರಿನ ಕಾರ್ಯಕ್ರಮ ದೊಡ್ಡ ಹಿಟ್ ಆದಂತೆ, ಆಸ್ಟ್ರೇಲಿಯಾದ ರಿಕ್ ಎವರೆಟ್ ಎಂಬ ವ್ಯಕ್ತಿಯೊಬ್ಬರು ’ಕಾಫಿ ಪೇ ಚರ್ಚಾ’ ಅಭಿಯಾನ ಮಾಡುತ್ತಿದ್ದಾರೆ.
ತಮ್ಮ ಮನೆಯ ಅಡುಗೆಮನೆಯ ಕಿಟಕಿ ಪಕ್ಕದಲ್ಲೇ ಪುಟ್ಟದೊಂದು ಜಾಗದಲ್ಲಿ ಕುರ್ಚಿಗಳು ಹಾಗೂ ಟೇಬಲ್ ಇಟ್ಟಿರುವ ಎವರೆಟ್ ಕೆಫೆಯನ್ನೇನೂ ನಡೆಸುತ್ತಿಲ್ಲ. ವೃತ್ತಿಯಲ್ಲಿ ಆಕ್ರೋಬ್ಯಾಟ್ ಆಗಿರುವ ರಿಕ್, ಕೋವಿಡ್-19 ಸಾಂಕ್ರಮಿಕದ ಕಾರಣ ಕಳೆದ ಮಾರ್ಚ್‌ನಲ್ಲಿ ಕೆಲಸ ಕಳೆದುಕೊಂಡಿದ್ದರು. ಅಡುಗೆ ಮಾಡುವುದನ್ನು ಬಲ್ಲವರಾದ ಎವರೆಟ್, ತಮ್ಮ ಬಿಡುವಿನ ಸಮಯವನ್ನು ನೆರವಿನ ಅಗತ್ಯ ಇರುವವರಿಗೆ ಸಹಾಯ ಮಾಡಲು ಬಳಸಿಕೊಳ್ಳಲು ಮುಂದಾಗಿದ್ದಾರೆ.
ಕಿಟಕಿಯ ಹೊರಗೆ “Free coffee to combat the virus” ಹೆಸರಿನ ಬೋರ್ಡ್ ನೇತುಹಾಕಲಾಗಿದ್ದು, “ಇದು ನನ್ನ ಕಾಫಿ ಕಿಟಕಿ ಪ್ರಾಜೆಕ್ಟ್. ಯಾವ ಕೋನದಲ್ಲೂ ಇದೊಂದು ವಾಣಿಜ್ಯೋದ್ದೇಶದ ಕೆಫೆ ಅಲ್ಲ. ನಿಮ್ಮ ಆಪ್ತರ ಮನೆಗೆ ಕಾಫಿ ಹೀರಲು ಹೋಗುತ್ತಿರುವಂತೆ ಅಂದುಕೊಳ್ಳಿ. ಇದೊಂದು ಗಿಫ್ಟ್ ಆಗಿದ್ದು, ಮಂದಹಾಸವನ್ನು ಬಿಟ್ಟು ಬೇರೇನೂ ಕೇಳುವುದಿಲ್ಲ” ಎಂದು ಎವರೆಟ್ ತಿಳಿಸಿದ್ದಾರೆ.