ಅಮೆರಿಕದ ಅಲಬಾಮಾದ ಶಾಲೆಗಳಲ್ಲಿ ಯೋಗ ಶಿಕ್ಷಣಗಳನ್ನ ಕಲಿಸುವಂತಹ ಮುಸೂದೆಗೆ ಗವರ್ನರ್ ಕೇ ಐವಿ ಸಹಿ ಹಾಕಿದ್ದಾರೆ. ಈ ಮೂಲಕ ಯೋಗ ಶಿಕ್ಷಣಕ್ಕೆ ಸುಮಾರು ಮೂರು ದಶಕಗಳ ಹಿಂದೆ ಹಾಕಲಾಗಿದ್ದ ನಿಷೇಧಕ್ಕೆ ಮುಕ್ತಿ ಸಿಕ್ಕಂತಾಗಿದೆ. ಗುರುವಾರದಂದು ಈ ಮಸೂದೆಗೆ ಕೇ ಐವಿ ಸಹಿ ಹಾಕಿದ್ದು ಈ ಮೂಲಕ ಯೋಗವು ಹಿಂದೂ ಧರ್ಮದೊಂದಿಗೆ ಸಂಪರ್ಕ ಹೊಂದಿದೆ ಎಂಬ ಕಾರಣ ನೀಡಿ 1993ರಲ್ಲಿ ರಾಜ್ಯ ಶಿಕ್ಷಣ ಮಂಡಳಿಯು ಯೋಗ ಅಭ್ಯಾಸಕ್ಕೆ ಹಾಕಿದ್ದ ನಿರ್ಬಂಧದಿಂದ ಮುಕ್ತಿ ಸಿಕ್ಕಂತಾಗಿದೆ.
ಸಾರ್ವಜನಿಕ ಶಾಲೆಗಳಲ್ಲಿ ಯೋಗಾಭ್ಯಾಸವನ್ನ ಮಾಡಲು ಅನುಮತಿ ನೀಡುವ ಮಸೂದೆಗೆ ಅಲ್ಲಿನ ಶಾಸಕಾಂಗವು ಅನುಮೋದನೆ ನೀಡಿದ ಕೆಲವೇ ದಿನಗಳಲ್ಲಿ ಗವರ್ನರ್ ಸಹಿ ಹಾಕಿದ್ದಾರೆ. ಯೋಗ ಅಭ್ಯಾಸವು ವಿವಿಧ ಭಂಗಿ ಹಾಗೂ ಮುದ್ರೆಗಳಿಗೆ ಮಾತ್ರ ಸೀಮಿತವಾಗಿರಬೇಕು. ಹಿಂದೂ ಧರ್ಮಕ್ಕೆ ಅತೀ ಹೆಚ್ಚು ಸಂಬಂಧಿಸಿರುವ ನಮಸ್ಕಾರ ಬಳಕೆಯನ್ನ ಮಾಡುವಂತಿಲ್ಲ ಎಂದು ಹೇಳಲಾಗಿದೆ.
ಯೋಗವು ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿದೆ ಎಂದು ಹಲವಾರು ಜನ ಪ್ರತಿನಿಧಿಗಳು ಹಾಗೂ ಕ್ರಿಶ್ಚಿಯನ್ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ ನಂತರ ಈ ರೀತಿಯ ಕೆಲ ಕಟ್ಟಪ್ಪಣೆಗಳನ್ನ ವಿಧಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಆಗಸ್ಟ್ 1ರಿಂದ ಈ ಹೊಸ ಕಾನೂನು ಜಾರಿಗೆ ಬರಲಿದೆ.