ಕಾಬೂಲ್: ಅಫ್ಘಾನಿಸ್ತಾನದ ತುಂಬು ಗರ್ಭಿಣಿ ತಾಜ್ ಬೀಬಿ ತಮ್ಮ ನಾಲ್ಕನೇ ಪತಿ ಸುರಕ್ಷಿತವಾಗಿ ಯುದ್ಧ ಕಣದಿಂದ ಮರಳುವಂತೆ ಪ್ರಾರ್ಥನೆ ನಡೆಸಿದ್ದಾರೆ. ಆಕೆಯ ಮೂವರು ಸೈನಿಕ ಗಂಡಂದಿರು ಈಗಾಗಲೇ ಯುದ್ಧದಲ್ಲಿ ಮಡಿದಿದ್ದಾರೆ.
ತಾಲಿಬಾನ್ ಉಗ್ರರು ಹಾಗೂ ಅಫ್ಘಾನ್ ಸೇನೆಯ ನಡುವೆ ನಡೆಯುತ್ತಿರುವ ಯುದ್ಧ ಅಂತ್ಯವಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕಳೆದ ಒಂದೇ ವಾರದಲ್ಲಿ ಕನಿಷ್ಠ 60 ಸೈನಿಕರು ಈ ಗಲಾಟೆಯಲ್ಲಿ ಮೃತಪಟ್ಟಿದ್ದಾರೆ.
ಪೂರ್ವ ಅಫ್ಘಾನಿಸ್ತಾನದ ಕುನಾರ್ ಎಂಬಲ್ಲಿನ ತಾಜ್ ಬೀಬಿ ಎಂಬ 33 ವರ್ಷದ ಮಹಿಳೆಯ ಮೂವರು ಪತಿಯಂದಿರು ಯುದ್ಧದಲ್ಲೇ ಮೃತಪಟ್ಟಿದ್ದಾರೆ. ಮೃತರ ಸಹೋದರ ಅಮಾನುಲ್ಲಾರನ್ನೇ ಮಹಿಳೆ ನಾಲ್ಕನೇ ಪತಿಯಾಗಿ ವರಿಸಿದ್ದಾರೆ. ಈಗ ಅವರೂ ಯುದ್ಧಕ್ಕೆ ತೆರಳಿದ್ದಾರೆ. ಬೀಬಿ, ಅಮಾನುಲ್ಲಾ ಫೋಟೋ ಇಟ್ಟುಕೊಂಡು ಮಕ್ಕಳೊಡನೆ ಗಡಿಯಲ್ಲಿ ಕಾದು ಕುಳಿತಿರುವ ಫೋಟೋ ವೈರಲ್ ಆಗಿದೆ.
“ನಾನು ನಾಲ್ಕನೇ ಬಾರಿ ವಿಧವೆಯಾಗಲು ಇಷ್ಟ ಪಡುವುದಿಲ್ಲ. ನನ್ನ ಐದು ಮಕ್ಕಳನ್ನು ಸಾಕಲಾರೆ” ಎನ್ನುತ್ತಿದ್ದಾರೆ ತಾಜ್ ಬೀಬಿ. ಅವರಿಗೆ 18 ವರ್ಷಕ್ಕೆ ಮದುವೆಯಾಗಿತ್ತು. ಕೆಲವೇ ವರ್ಷದಲ್ಲಿ ಮೊದಲ ಗಂಡ ಸಾವನ್ನಪ್ಪಿದ್ದ. ವಿಧವೆಯರು ಬೇರೆ ಮನೆಯವರನ್ನು ಮದುವೆಯಾಗಬಾರದು ಎಂಬ ಕಟ್ಟಳೆ ಅಫ್ಘಾನ್ ನಲ್ಲಿದೆ. ಇದರಿಂದ ಬೀಬಿ ಪತಿಯ ಸಹೋದರನನ್ನೇ ಮದುವೆಯಾದರು. ಅವರೂ ತೀರಿಕೊಂಡ ನಂತರ ಮೂರನೇ ಮದುವೆಯಾಗಿದ್ದರು. ಮೂರನೇ ಗಂಡನೂ ತಾಲಿಬಾನಿಗಳ ಗುಂಡಿಗೆ ಬಲಿಯಾಗಿದ್ದ. ಮತ್ತೆ ಮದುವೆಗೆ ಬೀಬಿ ಒಪ್ಪಿರಲಿಲ್ಲ. ಮಾವನ ಒತ್ತಾಯಕ್ಕೆ 3 ತಿಂಗಳ ನಂತರ ನಾಲ್ಕನೇ ಮದುವೆಯಾಗಿದ್ದರು.