ಮದುವೆ ಸಂಭ್ರಮದಲ್ಲಿದ್ದ ಮನೆಯೊಂದರಲ್ಲಿ ಮಾರ್ಟಾರ್ ಶೆಲ್ ಅಪ್ಪಳಿಸಿದ ಪರಿಣಾಮ ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ಅಫ್ಘಾನಿಸ್ತಾನದ ಉತ್ತರದಲ್ಲಿರುವ ಕಪಿಸಾ ಪ್ರಾಂತ್ಯದಲ್ಲಿ ನಡೆದಿದೆ.
ಇಲ್ಲಿನ ತಗಬ್ ಜಿಲ್ಲೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಈ ಜಾಗದಲ್ಲಿ ಅಫ್ಘನ್ ಸರ್ಕಾರ ಹಾಗೂ ತಾಲಿಬಾನ್ ಬಂಡುಕೋರರ ನಡುವೆ ಘರ್ಷಣೆ ಜೋರಾಗಿದೆ. ಈ ಮಾರ್ಟಾರ್ ಫೈರಿಂಗ್ ಸಂಬಂಧ ತಾಲಿಬಾನ್ ಹಾಗೂ ಅಫ್ಘನ್ ಭದ್ರತಾ ಪಡೆಗಳು ಪರಸ್ಪರ ಕೆಸರೆರಚಾಟ ಮಾಡುತ್ತಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ 11ರಂದು ಅಮೆರಿಕನ್ ತುಕಡಿಗಳನ್ನು ವಾಪಸ್ ಕರೆಯಿಸಿಕೊಳ್ಳುವುದಾಗಿ ವಾಷಿಂಗ್ಟನ್ ಘೋಷಿಸಿದ ಬಳಿಕ ಈ ದೇಶದಲ್ಲಿ ಹಿಂಸಾಚಾರ ವಿಪರೀತ ಎನ್ನುವ ಮಟ್ಟಕ್ಕೆ ಹೆಚ್ಚಾಗಿದೆ.
ಅಫ್ಘನ್ ಪಡೆಗಳು ಹಾಗೂ ತಾಲಿಬಾನ್ ಬಂಡುಕೋರರ ನಡುವಿನ ಘರ್ಷಣೆಯಲ್ಲಿ 2021ರ ಮೊದಲ ಮೂರು ತಿಂಗಳಲ್ಲಿ 1,800 ಅಫ್ಘನ್ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ವಿಶ್ವ ಸಂಸ್ಥೆ ಕಳೆದ ತಿಂಗಳು ತಿಳಿಸಿತ್ತು.
2020ರಲ್ಲಿ ಈ ಘರ್ಷಣೆಯಿಂದಾಗಿ 8500 ನಾಗರಿಕರಿಗೆ ಗಾಯಗಳಾಗಿದ್ದು, ಇವರಲ್ಲಿ 2,958 ಮಂದಿ ಮೃತಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ವತಂತ್ರ ಮಾನವ ಹಕ್ಕುಗಳ ಆಯೋಗದ ವಾರ್ಷಿಕ ವರದಿಯಲ್ಲಿ ತಿಳಿದುಬಂದಿದೆ.