ಪ್ರಸಕ್ತ ಶತಮಾನದ ಅತ್ಯಂತ ಜ್ವಲಂತ ಸವಾಲುಗಳಲ್ಲಿ ಒಂದಾದ ಹವಾಮಾನ ಬದಲಾವಣೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಾಕಷ್ಟು ಯತ್ನಗಳು ಆಗುತ್ತಲೇ ಇವೆ. ಧೃವ ಪ್ರದೇಶಗಳಲ್ಲಿರುವ ಮಂಜಿನ ಪದರಗಳು ದಿನೇ ದಿನೇ ಕರಗುತ್ತಿವೆ ಎಂಬ ಕಳವಳಕಾರಿ ಸತ್ಯಾಂಶವನ್ನು ಕೇಳುತ್ತಲೇ ಇದ್ದೇವೆ.
ಕಳೆದ ವರ್ಷದಂದು ಇದೇ ವಿಚಾರವಾಗಿ ಮಾತನಾಡಿದ್ದ ಗ್ರೇಟಾ ಥೆನ್‌ಬರ್ಗ್ ಹೆಸರಿನ ಬಾಲಕಿಯೊಬ್ಬಳು ದೊಡ್ಡ ಸೆನ್ಸೇಷನ್ ಆಗಿದ್ದಳು. ಆಕೆಯ ಬಳಿಕ ಇದೇ ರೀತಿಯ ಕೆಲಸಕ್ಕೆ ಇನ್ನಷ್ಟು ಎಳೆಯ ಮನಸ್ಸುಗಳು ಮುಂದಾಗಿದ್ದವು.
ಇದೀಗ ಮ್ಯಾ-ರೋಸ್ ಕ್ರೇಗ್ ಹೆಸರಿನ 18 ವರ್ಷದ ಬ್ರಿಟಿಷ್ ಹುಡುಗಿಯೊಬ್ಬಳು ಆರ್ಕ್ಟಿಕ್ ಪ್ರದೇಶದಲ್ಲಿರುವ ಮಂಜಿನ ಪದರವೊಂದರ ಮೇಲೆ ನಿಂತುಕೊಂಡು ‘Youth Strike for Climate’ ಭಿತ್ತಿಪತ್ರ ಹಿಡಿಯುವ ಮೂಲಕ ಹವಾಮಾನ ಬದಲಾವಣೆ ವಿರುದ್ಧ ತನ್ನದೊಂದು ದನಿಗೂಡಿಸಿದ್ದಾಳೆ. ಪಕ್ಷಿಪ್ರಿಯೆಯಾದ ಗ್ರೇಗ್, ‘Birdgirl’ ಹೆಸರಿನಲ್ಲಿ ಬ್ಲಾಗ್ ಒಂದನ್ನು ಬರೆಯುತ್ತಿದ್ದಾಳೆ. ಬ್ರಿಸ್ಟಲ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಕ್ರೇಗ್, ಈ ಗೌರವಕ್ಕೆ ಪಾತ್ರಳಾದ ಇಂಗ್ಲೆಂಡ್‌ನ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾಳೆ.