ನಕಲಿ ವ್ಯಕ್ತಿತ್ವ ತೋರಿಸಿಕೊಂಡು ಜನರನ್ನು ಮರಳು ಮಾಡುವ ಅನೇಕ ನಿದರ್ಶನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟನ್ನು ನೋಡುತ್ತಲೇ ಇರುತ್ತೇವೆ. ಜರ್ಮನಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಭಾರೀ ಸುದ್ದಿಯಲ್ಲಿದೆ.
ಫಾಸ್ಟ್ & ಫ್ಯೂರಿಯಸ್ ನಟ ವಿನ್ ಡೀಸೆಲ್ ಮೇಲೆ ಭಯಂಕರ ಕ್ರಶ್ ಬೆಳೆಸಿಕೊಂಡಿದ್ದ ಜರ್ಮನಿಯ ಕಟ್ಝಾ ಲೊರೆನ್ಝಾಗೆ ತನ್ನ ಮೆಚ್ಚಿನ ಹೀರೋನನ್ನು ನೋಡುವ ಆಸೆ. ಅದ್ಯಾವ ಮಟ್ಟಿಗೆ ಅಂದ್ರೆ, ತನ್ನನ್ನು ತಾನು ವಿನ್ ಡೀಸೆಲ್ ಎಂದು ಕರೆದುಕೊಂಡ ವ್ಯಕ್ತಿಯೊಬ್ಬನಿಗೆ $6,600ಗಳನ್ನು ಕೊಡುವಷ್ಟು…!
ಆನ್ಲೈನ್ ನಲ್ಲಿ ಪರಿಚಯವಾಗಿ ಆತನೊಂದಿಗೆ ರಿಲೇಷನ್‌ಶಿಪ್‌ಗೆ ಮುಂದಾದ ಲೊರೆನ್ಝ್ ಈ ಮೋಹಪಾಶದಲ್ಲಿ ಆಳಕ್ಕೆ ಇಳಿದುಬಿಟ್ಟಿದ್ದಾರೆ. ತಾನು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಕಳ್ಳರು ತನ್ನ ಬಳಿ ಇದ್ದದ್ದನ್ನೆಲ್ಲಾ ಕಿತ್ತುಕೊಂಡಿದ್ದು, ತನ್ನ ತವರಿಗೆ ಮರಳಲು $6,600 ಬೇಕೆಂದು ಈ ನಕಲಿ ವಿನ್ ಡೀಸೆಲ್ ಕೇಳಿಕೊಂಡಿದ್ದಾನೆ. ಆತನ ಖಾತೆಗೆ ದುಡ್ಡು ಹಾಕಿದ ಬಳಿಕ ಸತ್ಯಾಂಶವೇನೆಂದು ಲೊರೆನ್ಝಾಗೆ ತಿಳಿದಿದೆ. 23 ವರ್ಷದ ವೈದ್ಯಕೀಯ ವಿದ್ಯಾರ್ಥಿಯಾದ ಈ ನಕಲಿ ವಿನ್ ಡೀಸೆಲ್, ತನ್ನ ವ್ಯಾಸಂಗದ ಸಲುವಾಗಿ ಹೀಗೆ ಜನರಿಗೆ ಟೋಪಿ ಹಾಕುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಆತನ ವಿರುದ್ಧ ಪ್ರಕರಣ ಜರುಗಿಸಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.