ಮಿಚಿಗನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಿದ ಪದ್ಧತಿಯನ್ನು ಹಾಸ್ಯ ಮಾಡಲು ಮಿಚಿಗನ್ ಪ್ರಜೆಯೊಬ್ಬ ತನ್ನ ಮನೆಯ ಎದುರು ಶೌಚಾಲಯದ ಬೇಸಿನ್ ಇಟ್ಟಿದ್ದಾನೆ. “ಇಲ್ಲಿ ಮೇಲ್ ಬ್ಯಾಲೆಟ್ ಪೇಪರ್ ಹಾಕಿ” ಎಂದು ಬರೆದಿದ್ದಾನೆ.
ಜನಪರಿಚಿತ ಚುನಾವಣಾ ಪದ್ಧತಿಯನ್ನು ಹಾಸ್ಯ ಮಾಡಿದ ಬಗ್ಗೆ ಇನ್ಗಾಂ ಕೌಂಟಿ ಎಂಬ ಪ್ರದೇಶದ ಡೆಮೊಕ್ರಟಿಕ್ ಪಕ್ಷದ ಕ್ಲಾರ್ಕ್ ಬಾರ್ಬ್ ಬ್ಯಾರುಂ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ, ಮನೆಯ ಲಾನ್ ಮೇಲೆ ಬೇಸಿನ್ ಇಟ್ಟ ಭೂಪ ಯಾರು ಎಂಬುದು ಇನ್ನೂ ಪೊಲೀಸರಿಗೆ ತಿಳಿದಿಲ್ಲ. ತನಿಖೆ ನಡೆಸಲಾಗಿದೆ ಎಂದಿದ್ದಾರೆ.
ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತಗಳನ್ನು ಪೋಸ್ಟ್ ಮೂಲಕ ಹಾಕಲು ಅವಕಾಶ ನೀಡಲಾಗಿದೆ. ನವೆಂಬರ್ 3 ಮತದಾನದ ದಿನಾಂಕ ಮುಗಿದು 14 ದಿನದಲ್ಲಿ ಬಂದ ಅಂಚೆ ಮತಗಳನ್ನು ಪರಿಗಣಿಸಲಾಗುವುದು ಎಂದು ಚುನಾವಣಾ ಅಧಿಕಾರಿ ಹೇಳಿದ್ದಾರೆ. ಆದರೆ, ಸ್ಥಳದಲ್ಲಿ ಇಲ್ಲದವರ ಮತಗಳನ್ನು ಪೋಸ್ಟ್ ಮೂಲಕ ಪಡೆಯುವ ಪದ್ಧತಿಗೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.