ಕೋವಿಡ್-19 ಎಂಬುದು ಅದೆಷ್ಟು ಜನರ ಬದುಕನ್ನು ನಾಶ ಮಾಡಿದೆ ಎಂದು ಹೇಳಲು ಸಾಧ್ಯವಿಲ್ಲ. ಇರುವ ಕಮಿಟ್ಮೆಂಟ್ ಹೋಗಲಿ, ಆ ದಿನದ ಊಟಕ್ಕೆ ದುಡ್ಡಾದರೆ ಸಾಕು ಎನ್ನಿಸುವಷ್ಟರ ಮಟ್ಟಿಗೆ ಹಲವರ ಬದುಕನ್ನು ತಂದು ನಿಲ್ಲಿಸಿದೆ.
ಇಂಥದ್ದೇ ಕಷ್ಟ ಅನುಭವಿಸುತ್ತಿರುವ ಥಾಯ್ಲೆಂಡ್ ನ ಪೈಲೆಟ್ ಒಬ್ಬರು ಈಗ ಸಂಬಳವಿಲ್ಲದ್ದರಿಂದ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.
ಥಾಯ್ಲೆಂಡ್ ಸಹ ಪೈಲೆಟ್ ಆಗಿರುವ ನಕರಿನ್ ಇಂಟಾ ಎಂಬುವರು 4 ವರ್ಷಗಳಿಂದ ಪೈಲೆಟ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಆದರೆ, ಈಗ ಕೆಲಸದಿಂದ ತೆಗೆದು ಹಾಕದಿದ್ದರೂ ಲಾಕ್ ಡೌನ್ ಹಿನ್ನೆಲೆಯಲ್ಲಿ ವೇತನರಹಿತ ರಜೆ ನೀಡಲಾಗಿದೆ. ಆದರೆ, ಜೀವನ ನಡೆಸಲು ಹಣದ ಅವಶ್ಯಕತೆ ಇರುವುದರಿಂದ ಈಗ ಅನಿವಾರ್ಯವಾಗಿ ಸ್ಥಳೀಯ ಆನ್ ಲೈನ್ ಮೆಸೆಂಜರ್ ಆಪ್ ಮೂಲಕ ಫುಡ್ ಡೆಲಿವರಿ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲಿನ ಬಹುತೇಕ ವಿಮಾನಯಾನ ಸಿಬ್ಬಂದಿಗೆ ವೇತನವನ್ನು ನೀಡಲಾಗುತ್ತಿಲ್ಲ. ಮತ್ತೆ ಕೆಲವು ಏರ್ ಲೈನ್ ಸಂಸ್ಥೆಗಳು ಅರ್ಧ ವೇತನವನ್ನು ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಇಂಟಾ ಹೇಳಿಕೊಂಡಿದ್ದಾರೆ. ಅಲ್ಲದೆ, ಇವರ ಬಹಳಷ್ಟು ಸ್ನೇಹಿತರು ತಮ್ಮ ಕೆಲಸ ಜೊತೆ ಈ ರೀತಿಯ ಉಪ ಕಸುಬಿಗೆ ಕೈಹಾಕಿದ್ದು, ಜೀವನ ಎಂದಿನ ಹಂತಕ್ಕೆ ಮರಳುವವರೆಗೆ ಇದು ಅನಿವಾರ್ಯ ಎಂದು ಹೇಳಿಕೊಂಡಿದ್ದಾರೆ.