ಮನೆಯಲ್ಲೊಂದು ಮದುವೆ ಕಾರ್ಯಕ್ರಮ ಇದೆ ಅಂದರೆ ಸಾಕು ಎಷ್ಟು ರಜೆ ಇದ್ದರೂ ಸಾಕಾಗೋದಿಲ್ಲ. ಇನ್ನು ನಮ್ಮದೇ ಮದುವೆ ಅಂದರೆ ಕೇಳಬೇಕೆ..? ಆಫೀಸಿನಲ್ಲಿ ರಜೆ ಕೊಟ್ಟಷ್ಟೂ ಬೇಕು ಎನ್ನುತ್ತೇವೆ.
ಹಾಗಂತ ಕಚೇರಿಗಳಲ್ಲಿ ನಾವು ಕೇಳಿದಷ್ಟು ರಜೆ ಸಿಗೋದೂ ಇಲ್ಲ. ಆದರೆ ತೈವಾನ್ನ ಬ್ಯಾಂಕ್ ಸಿಬ್ಬಂದಿಯೊಬ್ಬ ಮದುವೆಗೆ ದೀರ್ಘಕಾಲದ ರಜೆ ಪಡೆಯುವ ಸಲುವಾಗಿ ಭರ್ಜರಿ ಪ್ಲಾನ್ ಮಾಡಿದ್ದಾನೆ.
ತೈಪೇಯಿ ಬ್ಯಾಂಕ್ನಲ್ಲಿ ಕ್ಲರ್ಕ್ ಆಗಿರುವ ಈತ ಒಂದೇ ಯುವತಿಯನ್ನ ನಾಲ್ಕು ಬಾರಿ ಮದುವೆಯಾಗಿ ಮೂರು ಬಾರಿ ವಿಚ್ಛೇದನ ನೀಡುವ ಮೂಲಕ ತನ್ನ ರಜೆಯನ್ನ 32 ದಿನಗಳವರೆಗೆ ತಳ್ಳಿದ್ದಾನೆ..!
ಈತ ಬ್ಯಾಂಕಿನಲ್ಲಿ ರಜೆಗೆ ಅರ್ಜಿ ಸಲ್ಲಿಸಿದ ವೇಳೆ ಬ್ಯಾಂಕ್ ಕೇವಲ 8 ದಿನಗಳ ರಜೆಯನ್ನ ಮಂಜೂರು ಮಾಡಿತ್ತು. ಕಳೆದ ವರ್ಷ ಏಪ್ರಿಲ್ 6ರಂದು ವಿವಾಹವಾದ ಈತ ಆಕೆಗೆ ವಿಚ್ಚೇದನ ನೀಡಿದ್ದ. ಮಾರನೇ ದಿನವೇ ಬ್ಯಾಂಕಿನಲ್ಲಿ ಮತ್ತೊಮ್ಮೆ ರಜೆಗೆ ಅರ್ಜಿ ಸಲ್ಲಿಸಿ ಅದೇ ಯುವತಿಯನ್ನ ಮದುವೆಯಾದ. ಮತ್ತೆ ಡಿವೋರ್ಸ್ ನೀಡಿದ. ಹೀಗೆ ಆತ ನಾಲ್ಕು ಬಾರಿ ಒಂದೇ ಯುವತಿಯನ್ನ ಮದುವೆಯಾಗಿ ಆಕೆಗೆ ಮೂರು ಬಾರಿ ವಿಚ್ಛೇದನ ನೀಡಿದ್ದಾನೆ. ಈ ಪ್ಲಾನ್ನ ಮೂಲಕ ಆತ ಒಟ್ಟು 32 ದಿನಗಳ ರಜೆಯನ್ನ ಪಡೆದುಕೊಂಡಿದ್ದಾನೆ.
ಆದರೆ ಈತನ ಪ್ಲಾನ್ ಬಹಳ ದಿನಗಳವರೆಗೆ ನಡೆಯಲಿಲ್ಲ. ಈತನ ಮಸಲತ್ತನ್ನ ಅರಿತ ಬ್ಯಾಂಕ್ನ ಆಡಳಿತ ಮಂಡಳಿ ಇನ್ನಷ್ಟು ರಜೆಯನ್ನ ನೀಡೋಕೆ ನಿರಾಕರಿಸಿತ್ತು.
ಈತನ ರಜಾ ಅರ್ಜಿಯನ್ನ ನಿರಾಕರಿಸಿದ ಬಳಿಕ ಸುಮ್ಮನಾಗದ ಕ್ಲರ್ಕ್ ಬ್ಯಾಂಕ್ ವಿರುದ್ಧ ತೈಪೆ ಸಿಟಿ ಕಾರ್ಮಿಕ ಇಲಾಖೆಗೆ ದೂರನ್ನ ದಾಖಲಿಸಿದ. ಕಾರ್ಮಿಕ ರಜೆ ನಿಯಮಗಳ 2ನೇ ವಿಧಿಯನ್ನ ಬ್ಯಾಂಕ್ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.
ಈ ಕಾನೂನಿನ ಪ್ರಕಾರ ಮದುವೆಯ ಕಾರಣಕ್ಕೆ ನೌಕರರು 8 ದಿನಗಳ ವೇತನ ಸಹಿತ ರಜೆಯನ್ನ ಪಡೆಯಲು ಅರ್ಹರಾಗಿರುತ್ತಾರೆ. ಹೀಗಾಗಿ ಈ ಕ್ಲರ್ಕ್ ನಾಲ್ಕು ಬಾರಿ ಮದುವೆಯಾಗಿರುವ ಕಾರಣ 32 ದಿನಗಳ ರಜೆಗೆ ವೇತನ ನೀಡಬೇಕು ಎಂದು ಬ್ಯಾಂಕ್ಗೆ ಸೂಚನೆ ನೀಡಿದೆ. ಅಲ್ಲದೇ ಕಾರ್ಮಿಕ ಕಾನೂನನ್ನ ಉಲ್ಲಂಘಿಸಿದ ಕಾರಣ ಬ್ಯಾಂಕ್ಗೆ 52,800 ರೂಪಾಯಿ ದಂಡವನ್ನ ವಿಧಿಸಲಾಗಿದೆ.