ಅಪರಾಧ ಪ್ರಕರಣಗಳಲ್ಲಿ ತೀರ್ಪು ಕೊಡೋದು ಅಂದರೆ ನ್ಯಾಯಾಲಯಕ್ಕೆ ಅದು ಸುಲಭದ ಕೆಲಸವೇನಲ್ಲ. ಅದರಲ್ಲೂ ಎರಡೂ ಕಡೆಯ ವಾದ ಬಲಿಷ್ಟವಾಗಿದೆ ಎಂದಾದಾಗ ತೀರ್ಪು ನೀಡುವ ಸಮಯ ಇನ್ನೂ ಮುಂದಕ್ಕೆ ಹೋಗಬಹುದು. ಆಗ ಜೈಲಿನಲ್ಲಿ ಇದ್ದವನು ನಿರಪರಾಧಿಯಾದರೂ ಸಹ ತೀರ್ಪು ಬರುವವರೆಗೂ ಸೆರೆವಾಸ ಖಾಯಂ.
ಅಮೆರಿಕದ ಪ್ರಜೆಯಾಗಿದ್ದ ಜೋ ಡಿ ಅಂಬ್ರಾಸಿಯೋ ಎಂಬಾತ ತಾನು ಮಾಡದ ತಪ್ಪಿಗೆ ಜೈಲಿನಲ್ಲಿ ಜೀವನ ಕಳೆದಿದ್ದಾನೆ. ಹಾಗೂ ಇನ್ನೇನು ಮರಣದಂಡನೆಗೆ ಕೆಲವೆ ದಿನಗಳು ಬಾಕಿ ಇದೆ ಎನ್ನೋವಾಗ ಪಾದ್ರಿಯೊಬ್ಬರ ದೆಸೆಯಿಂದ ಪಾರಾಗಿದ್ದಾರೆ.
1988ರಲ್ಲಿ ಜೋ 26 ವರ್ಷದವನಾಗಿದ್ದಾಗ ಅವರ ವಿರುದ್ಧ 19 ವರ್ಷದ ಆಂಥೋನಿ ಎಂಬಾತನನ್ನ ಕೊಲೆ ಮಾಡಿದ ಆರೋಪ ಎದುರಾಗಿತ್ತು. ಆಂಥೋನಿ ಮೃತದೇಹ ಕ್ಲೀವ್ಲ್ಯಾಂಡ್ ಕ್ರೀಕ್ನಲ್ಲಿ ಗಂಟಲು ಕತ್ತರಿಸಿದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಜೋ ಸೇರಿದಂತೆ ಮೂವರನ್ನ ಬಂಧಿಸಿದರು.
ಕೇವಲ ಮೂರು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ಜೋ ಹಾಗೂ ಇನ್ನೊಬ್ಬ ಆರೋಪಿ ಕೀನನ್ಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿ ಇನ್ನೊಬ್ಬ ಕೈದಿಯನ್ನ ಭೇಟಿಯಾಗಲು ಬಂದಿದ್ದ ಮಾಜಿ ವಕೀಲ ಹಾಗೂ ನರ್ಸ್ ಆಗಿದ್ದ ಫಾದರ್ ನೀಲ್ ಎಂಬವರನ್ನ ಭೇಟಿಯಾದ ಜೋ ಮಾಡದ ತಪ್ಪಿಗೆ ತನಗಾದ ಶಿಕ್ಷೆಯನ್ನ ಹೇಳಿದ್ದಾರೆ.
ಇದಾದ ಬಳಿಕ ಫಾದರ್ ನೀಲ್ರ ಕಾನೂನು ಕುಶಲತೆಯಿಂದಾಗಿ ಪ್ರಕರಣ ಮರು ತನಿಖೆಗೆ ಒಳಪಟ್ಟಿದ್ದು ಬರೊಬ್ಬರಿ 20 ವರ್ಷಗಳ ಬಳಿಕ ಜೋ ಶಿಕ್ಷೆಯಿಂದ ಪಾರಾಗಿದ್ದಾರೆ. ಹಾಗೂ 1973 ರಿಂದ ಜೈಲು ಶಿಕ್ಷೆಯಿಂದ ಪಾರಾದ 140ನೇ ವ್ಯಕ್ತಿಯಾಗಿ ಜೋ ಹೊರಹೊಮ್ಮಿದ್ದಾರೆ.