ಮಿಷಿಗನ್: ಆನ್ ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳ ಅಜ್ಜಿ ತೊಂದರೆಗೊಳಗಾಗಿದ್ದನ್ನು ಕಂಡ ಶಿಕ್ಷಕಿ ಆಕೆಯ ರಕ್ಷಣೆಗೆ ಕ್ರಮ ವಹಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಶಿಕ್ಷಕಿಯ ಕಾರ್ಯಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮಿಷಿಗನ್ ನಗರದ ಎಲಿಮೆಂಟ್ರಿ ಶಾಲೆಯ ಒಂದನೇ ತರಗತಿ ಶಿಕ್ಷಕಿ ಜೂಲಿಯಾ ಕೋಚ್ ಸೆಪ್ಟೆಂಬರ್ 22 ರಂದು ಆನ್ ಲೈನ್ ತರಗತಿ ಮಾಡುತ್ತಿದ್ದರು. ತರಗತಿ ಕೇಳುತ್ತಿದ್ದ ಬಾಲಕಿಯೊಬ್ಬಳ ಬಳಿ ಬಂದ ಆಕೆಯ ಅಜ್ಜಿ ಏನೋ ಹೇಳಲು ಯತ್ನಿಸುತ್ತಿರುವುದನ್ನು ಶಿಕ್ಷಕಿ ಜೂಲಿಯಾ ಗಮನಿಸಿದ್ದರು. ಅಜ್ಜಿಗೆ ಏನೋ ತೊಂದರೆ ಉಂಟಾಗುತ್ತಿದೆ ಎಂದು ಅರಿತ ಅವರು ತಕ್ಷಣ ಶಾಲೆಯ ಪ್ರಾಂಶುಪಾಲ ಚಾರ್ಲಿ ಲೌಲೇಡಿ ಅವರಿಗೆ ಮಾಹಿತಿ ನೀಡಿದ್ದರು.
ಪ್ರಾಂಶುಪಾಲ ಚಾರ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿ ವಿದ್ಯಾರ್ಥಿನಿಯ ಮನೆಗೆ ಆಂಬುಲೆನ್ಸ್ ಹಾಗೂ ಸಿಬ್ಬಂದಿ ಕಳಿಸಿದ್ದರು. ಅಚ್ಚರಿ ಎಂದರೆ ಆ ಮನೆಯಲ್ಲಿ ಅಜ್ಜಿ ಸಿಂಥಿಯಾ ಫಿಲಿಪ್ಸ್ ಪಾರ್ಶ್ವ ವಾಯುವಿಗೆ ಒಳಗಾಗಿದ್ದರು. ಮನೆಯಲ್ಲಿ ಆಕೆಯ ರಕ್ಷಣೆಗೆ ಚಿಕ್ಕ ಬಾಲಕಿ ಹಾಗೂ ಆಕೆಯ ಅಜ್ಜ ಬಿಟ್ಟರೆ ಬೇರ್ಯಾರೂ ಇರಲಿಲ್ಲ. ತಕ್ಷಣ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಲಾಯಿತು.
ತರಗತಿ ವೇಳೆ ವೃದ್ಧೆಯ ಸಂಕಷ್ಟ ಗುರುತಿಸಿ ಸಮಯ ಪ್ರಜ್ಞೆ ಮೆರೆದ ಸೂಕ್ಷ್ಮಮತಿ ಶಿಕ್ಷಕಿ ಜೂಲಿಯಾ ಕೋಚ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.