ಕೋವಿಡ್-19 ಸಾಂಕ್ರಮಿಕದ ವಿರುದ್ಧ ಸಂಪೂರ್ಣ ಜಯ ಸಾಧಿಸಲು ಸಫಲವಾಗಿರುವ ನ್ಯೂಝೀಲೆಂಡ್, ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಒಂದೆಡೆ ದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ, ಬ್ರಿಟನ್, ಭಾರತ, ಬ್ರೆಝಿಲ್‌ಗಳೆಲ್ಲಾ ಈ ಸೋಂಕಿನಿಂದ ತತ್ತರಿಸಿಬಿಟ್ಟಿದ್ದರೆ, ಅತ್ತ ಪೆಸಿಫಿಕ್ ಸಾಗದರ ಈ ದ್ವೀಪಗುಚ್ಛದ ದೇಶವು ಅಭೂತಪೂರ್ವ ಸಾಧನೆಗೈದಿದೆ.
ಫೆಬ್ರವರಿ ಅಂತ್ಯದಲ್ಲಿ ಈ ಸೋಂಕು ಕಾಣಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ನ್ಯೂಝೀಲೆಂಡ್‌ನಲ್ಲಿ ಯಾವುದೇ ಸಕ್ರಿಯ ಪ್ರಕರಣಗಳು ದಾಖಲಾಗಿಲ್ಲ.
ನ್ಯೂಝೀಲೆಂಡ್‌ನಲ್ಲಿ ಒಟ್ಟಾರೆ 1,154 ಮಂದಿ ಸೋಂಕಿತರಿದ್ದು 22 ಮಂದಿ ವೈರಾಣುವಿಗೆ ಜೀವ ತೆತ್ತಿದ್ದಾರೆ. ವೈರಾಣುವನ್ನ ಕೇವಲ ನಿಯಂತ್ರಿಸುವುದಲ್ಲ, ಮುಂದಿನ ದಿನಗಳಲ್ಲಿ ಇಲ್ಲದಂತೆ ಮಾಡುವವರೆಗೂ ವಿರಮಿಸುವುದಿಲ್ಲ ಎಂದು ನ್ಯೂಝೀಲೆಂಡ್ ಸರ್ಕಾರ ಪಣತೊಟ್ಟಿದೆ.
ಇದೇ ಖುಷಿಯಲ್ಲಿ ಅಲ್ಲಿನ ಪ್ರಧಾನಿ, 39ರ ಹರೆಯದ ಜಸಿಂದಾ ಆರ್ಡರ್ನ್ ತಮ್ಮ 2 ವರ್ಷದ ಮಗುವಿನೊಂದಿಗೆ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.