ಸೇಂಟ್ ಪೌಲ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಎರಡೂ ರಾಜಕೀಯ ಪಕ್ಷಗಳ ಪ್ರಚಾರ, ಪರಸ್ಪರ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಜಾಹೀರಾತಿನಲ್ಲಿ ಟ್ರಂಪ್ ವಿರುದ್ಧ ಪ್ರಕಟವಾದ ಸಾಲುಗಳು ಜಾಲತಾಣಗಳಲ್ಲಿ ಗಮನ ಸೆಳೆದಿದೆ.
ಮಿನ್ನೆಸೋಟ ರಾಜ್ಯದ ಸೇಂಟ್ ಪೌಲ್ ನ ಜಾರ್ಜಿಯಾ ಮೆ ಅಡ್ಕಿನ್ಸ್ ಅವರು ಪಾರ್ಶ್ವವಾಯು ಆಗಿ ಸೆ. 28 ರಂದು ಸೇಂಟ್ ಪೌಲ್ ಯುನೈಟೆಡ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಆ. 19, 1927 ರಲ್ಲಿ ಜನಿಸಿದ ಅಡ್ಕಿನ್ಸ್ ವೆಸ್ಟ್ ಪಬ್ಲಿಷಿಂಗ್ ಕಂಪನಿಯಲ್ಲಿ ಲಿನೋ ಟೈಪಿಸ್ಟ್ ಆಗಿ 32 ವರ್ಷ ಸೇವೆ ಸಲ್ಲಿಸಿದ್ದರು. ತಮ್ಮ 93 ನೇ ವರ್ಷದಲ್ಲಿ ಅವರು ಮೃತರಾದ ಸುದ್ದಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.
ಅವರ ಆತ್ಮಕ್ಕೆ ಶಾಂತಿ ಕೋರಿ ಅಕ್ಟೋಬರ್ 11 ರಂದು ಸ್ಥಳೀಯ ಚರ್ಚ್ ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಲಿಗಸಿ ಡಾಡ್ ಕಾಂ ಎಂಬ ವೆಬ್ ಸೈಟ್ ನಲ್ಲಿ ಪ್ರಕಟವಾದ ಜಾಹೀರಾತು ಗಮನ ಸೆಳೆದಿದೆ.
ಶ್ರದ್ಧಾಂಜಲಿಗಾಗಿ ಹೂವನ್ನು ಬಳಸದಂತೆ ಅವರು ತಮ್ಮ ಕುಟುಂಬ ಹಾಗೂ ಸ್ನೇಹಿತರ ಬಳಿ ಕೇಳಿದ್ದಾರೆ ಎನ್ನಲಾಗಿದೆ. ಹೂವಿಗೆ ಬದಲಾಗಿ ನೀವು ಡೊನಾಲ್ಡ್ ಟ್ರಂಪ್ ಗೆ ಮತ ಹಾಕದೇ ನನಗೆ ಶ್ರದ್ಧಾಂಜಲಿ ಸಲ್ಲಿಸಿ ಎಂದು ಅವರು ಮನವಿ ಮಾಡಿದ್ದಾರೆ ಎಂದು ಪ್ರಕಟಿಸಲಾಗಿದೆ.