
ಬಾಲ್ಯದ ದಿನಗಳಲ್ಲಿ ಇದ್ದಾಗ ಯಾರಾದರೂ ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಬಹುಮಾನ ನೀಡಿದ್ರೆ ಸ್ವರ್ಗವನ್ನೇ ಗೆದ್ದಷ್ಟು ಖುಷಿಯಾಗ್ತಾ ಇತ್ತು. ಅಂತದ್ರಲ್ಲಿ ನೀವು ಮಾಡಿದ ಕೆಲಸ ಸಿಕ್ಕಾಪಟ್ಟೆ ಮೆಚ್ಚುಗೆಯಾಗಿ ಯಾರಾದರೂ 72 ಸಾವಿರ ರೂಪಾಯಿಗೂ ಅಧಿಕ ಹಣ ನೀಡಿದ್ರೆ ಖುಷಿಗೆ ಪಾರವೇ ಇರೋದಿಲ್ಲ.
ಇದೇ ರೀತಿ ಇಂಡಿಯಾನದ ಬಾಲಕನೊಬ್ಬ ತಾನು ಮಾಡಿದ ಒಳ್ಳೆಯ ಕೆಲಸದಿಂದಾಗಿ ತಂದೆಯ ಬಳಿಯಿಂದ ಇಷ್ಟು ದೊಡ್ಡ ಮೊತ್ತದ ಬಹುಮಾನ ಪಡೆದಿದ್ದಾನೆ.
ತನ್ನ ತಂದೆಯ ಕಾರನ್ನ ಶುಚಿ ಮಾಡುತ್ತಿದ್ದ ವೆಳೆ ಬಾಲಕನಿಗೆ ಒಂದು ಕವರ್ ದೊರಕಿದೆ. 9 ವರ್ಷದ ಬಾಲಕ ತನಗೆ ಕಾರಿನ ಫ್ಲೋರ್ ಮ್ಯಾಟ್ನಡಿಯಲ್ಲಿ ಈ ಕವರ್ ಸಿಕ್ಕಿದೆ ಎಂದು ಹೇಳಿದಾಗ ತಂದೆ ಅದರ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಮೈಕೆಲ್ ಮೊದಲು ಇದು ಯಾವುದೋ ಬೇಡದ ಕಾಗದ ಇರಬಹುದೆಂದು ಭಾವಿಸಿ ಮಗನ ಮಾತಿಗೆ ಲಕ್ಷ್ಯ ಕೊಡದೇ ಸುಮ್ಮನೇ ಅವರ ಕೆಲಸದಲ್ಲಿ ಮಗ್ನರಾಗಿದ್ದರು. ಆದರೆ ಪುತ್ರನ ಒತ್ತಾಸೆಯ ಮೇರೆಗೆ ಆ ಕವರ್ನ್ನು ತೆಗೆದು ನೋಡಿದಾಗ ಶಾಕ್ ಆಗಿದ್ದಾರೆ.
ತನ್ನ ಪುತ್ರ ನೀಡಿದ ಕವರ್ನ್ನು ನೋಡಿದ ಬಳಿಕ ಕೂಡಲೇ ಮೈಕೆಲ್ ತಮ್ಮ ಪತ್ನಿಗೆ ಕರೆದಿದ್ದಾರೆ. ಹಾಗೂ ಪತ್ನಿಯ ಎದುರು ಮಗನ ಮಹತ್ಕಾರ್ಯವನ್ನ ಹೊಗಳಿದ್ದಾರೆ. ಏಕೆಂದರೆ ಆ ಕವರ್ನಲ್ಲಿ ಮೈಕೆಲ್ಗೆ ಬರೋಬ್ಬರಿ 5000 ಡಾಲರ್ ಮೌಲ್ಯದ ಹಣ ಪತ್ತೆಯಾಗಿದೆ. ಈ ನಗದಿನ ಜೊತೆಯಲ್ಲಿ ಸೌತ್ ಕ್ಯಾರೋಲಿನಾದ ಕುಟುಂಬವೊಂದಕ್ಕೆ ಸೇರಿದ ಚೆಕ್ ಕೂಡ ಲಭ್ಯವಾಗಿದೆ.
ಈ ಹಣವನ್ನ ತಾನೇ ಇಟ್ಟುಕೊಳ್ಳಬೇಕೆಂಬ ಸ್ವಾರ್ಥಕ್ಕೆ ಒಳಗಾಗದ ಮೈಕೆಲ್ ಅದರ ನಿಜವಾದ ಮಾಲೀಕರನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಮೈಕೆಲ್ರ ಮಾನವೀಯತೆಗೆ ಮೆಚ್ಚಿ 1000 ಡಾಲರ್ ಬಹುಮಾನವನ್ನ ನೀಡಿದ್ದಾರೆ. ಸದ್ಯ ಈ ಬಹುಮಾನದ ಹಣ ಮೈಕೆಲ್ ಪತ್ನಿಯ ಬಳಿಯಲ್ಲಿದ್ದು ಪುತ್ರ ತನ್ನಗಿಷ್ಟದ ಆಟದ ಸಾಮಗ್ರಿಗಳನ್ನ ಈ ಹಣದಿಂದ ಕೊಳ್ಳೋಕೆ ಪ್ಲಾನ್ ಮಾಡುತ್ತಿದ್ದಾನಂತೆ.