ಚಿಕಾಗೊ: ಸುಳ್ಳು ಹೇಳಿಕೊಂಡು ಮನೆಯೊಳಗೆ ನುಗ್ಗಿ ಕಳ್ಳತನಕ್ಕೆ ಬಂದಿದ್ದ ಮೂವರನ್ನು 81 ವರ್ಷದ ವೃದ್ಧನೋರ್ವ ಓಡಿಸಿದ ಘಟನೆ ಅಮೆರಿಕಾದ ಚಿಕಾಗೊದಲ್ಲಿ ನಡೆದಿದೆ.
ವಿಶೇಷ ಎಂದರೆ ವೃದ್ಧ ಕಳ್ಳರನ್ನು ಓಡಿಸಿದ್ದು ಪುರಾತನವಾದ ತನ್ನ ಅಜ್ಜನ ಐರಿಶ್ ಕೋಲಿನಿಂದ. ಚಿಕಾಗೊ ಉಪ ನಗರದಲ್ಲಿ ವಾಸಿಸುತ್ತಿದ್ದ ಮಾಜಿ ಮೀನುಗಾರ ಡ್ಯಾನ್ ಹಾಗೂ ಅವರ ಪತ್ನಿ ಬಾರ್ಬರಾ ಎಂಬುವವರು ಈ ಕಾರ್ಯ ಮಾಡಿ ಸುದ್ದಿಯಾದ ವೃದ್ಧರು.
ಅಗತ್ಯ ಸೇವೆಗಳ ವ್ಯಕ್ತಿ ಎಂದು ಹೇಳಿಕೊಂಡು ಒಂದು ದಿನ ವೃದ್ಧರ ಮನೆಗೆ ಆಗಂತುಕ ಬಂದಿದ್ದ. ನಗರದಲ್ಲಿ ಸಂಭವಿಸಿದ ವಿದ್ಯುತ್ ಅವಘಡಕ್ಕೆ ಸಂಬಂಧಿಸಿದಂತೆ ನಿಮ್ಮ ಮನೆಯ ವಿದ್ಯುತ್ ಪ್ಯೂಸ್ ಬಾಕ್ಸ್ ಪರಿಶೀಲಿಸಬೇಕು ಎಂದಿದ್ದ. ಅದಕ್ಕೆ ಇಬ್ಬರು ಅನುವು ಮಾಡಿಕೊಟ್ಟಿದ್ದರು.
ಮನೆಯ ನೆಲಮಾಳಿಗೆಯಲ್ಲಿದ್ದ ಪ್ಯೂಸ್ ನ್ನು ತೋರಿಸಲು ವೃದ್ಧೆ ಬಾರ್ಬರಾ ಆಗಂತುಕನ ಜತೆ ತೆರಳಿದ್ದಳು. ಆದರೆ, ಆತನ ವರ್ತನೆಯ ಬಗ್ಗೆ ಅನುಮಾನ ಬಂದ ಆಕೆ ಮೇಲ್ಮಹಡಿಯಲ್ಲಿದ್ದ ತಮ್ಮ ಕೋಣೆಯಲ್ಲಿ ಯಾರೋ ಬಂದಿದ್ದಾರೆ ಎಂದು ತಮ್ಮ ಪತಿಗೆ ಕೂಗಿ ಹೇಳಿದ್ದಾಳೆ.
ಇದರಿಂದ ಎಚ್ಚೆತ್ತ ವೃದ್ಧ ಡ್ಯಾನಿ ಕೋಣೆಗೆ ಹೋಗಿ ನೋಡಿದಾಗ ಮೂವರು ಕಳ್ಳರು ಕೋಣೆಯಲ್ಲಿದ್ದರು. ವೃದ್ಧ ಡ್ಯಾನಿ ತಮ್ಮ ಬಳಿ ಇದ್ದ ಕೋಲಿನಿಂದಲೇ ಅವರನ್ನು ಬೆದರಿಸಿ ಓಡಿಸಿದ್ದಾರೆ.