ಲಂಡನ್: 73 ವರ್ಷದ ವೃದ್ಧರೊಬ್ಬರ ಕ್ರೀಡಾ ಮನೋಭಾವವನ್ನು ಮೆಚ್ಚಲೇಬೇಕು. ಈ ಇಳಿವಯಸ್ಸಿನಲ್ಲಿ ಕೋವಿಡ್ 19 ವಿರುದ್ಧ ಹೋರಾಟಕ್ಕೆ ಕೈಜೋಡಿಸಿ, ಹಣ ಸಂಗ್ರಹ ಮಾಡುತ್ತಿದ್ದಾರೆ. ಅದೂ ಸ್ಕಿಪ್ಪಿಂಗ್ ಮಾಡುವ ಮೂಲಕ ಎಂದರೆ ನೀವು ನಂಬಲೇಬೇಕು. ಹೀಗಾಗಿ ಇವರೀಗ “ಸ್ಕಿಪ್ಪರ್ ಸಿಖ್’’ ಎಂದೇ ಖ್ಯಾತಿಗೊಳಪಟ್ಟಿದ್ದಾರೆ.
ಇವರು ಸ್ಕಿಪ್ಪಿಂಗ್ ಮಾಡುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದು, ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು 15 ಸಾವಿರ ಡಾಲರ್ ಅನ್ನು ಸಂಗ್ರಹಿಸಿದ್ದಾರೆ. ಈ ಮೊತ್ತವನ್ನು ಎನ್.ಎಚ್.ಎಸ್. ಗೆ ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೆ, ಈ ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ 250,000 ವೀಕ್ಷಣೆ ಕಂಡಿದೆ.
ಇಂಗ್ಲೆಂಡ್ ನಲ್ಲಿ ಯುವಕರು ಸೇರಿದಂತೆ ಎಲ್ಲ ನಾಗರಿಕರಿಗೆ ಸ್ಫೂರ್ತಿಯಾಗುವಂತೆ ಮಾಡಿದ ಈ ಕ್ರಮ ಗೌರವಕ್ಕೂ ಪಾತ್ರರಾಗಿದ್ದು, ಇವರ ಈ ಮಹತ್ಕಾರ್ಯಕ್ಕೆ ಪಾಯಿಂಟ್ಸ್ ಆಫ್ ಲೈಟ್ಸ್ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಈ ಸಾಧನೆಗೆ ಸಂತೋಷಗೊಂಡ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಪತ್ರ ಬರೆದು, “ನಿಮ್ಮ ಸ್ಕಿಪ್ಪಿಂಗ್ ಸಿಖ್ ವಿಡಿಯೋ ಜಗತ್ತಿನಾದ್ಯಂತ ಜನರನ್ನು ಜಾಗೃತಗೊಳಿಸಿದೆ’ ಎಂದು ಹೊಗಳಿದ್ದಾರೆ.