ಟರ್ಕಿಯ ಕರಾವಳಿ ಭಾಗ ಹಾಗೂ ಗ್ರೀಕ್ ದ್ವೀಪಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಸತತ 33 ಗಂಟೆಗಳ ಕಾಲ ಕಟ್ಟಡ ಅವಶೇಷಗಳಡಿ ಸಿಲುಕಿದ್ದ 70 ವರ್ಷದ ವೃದ್ಧನನ್ನ ಜೀವಂತವಾಗಿ ಹೊರತರುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಅಹ್ಮೆತ್ ಸಿಟಿಮ್ ಎಂಬ ಹೆಸರಿನ ಈ ವೃದ್ಧನನ್ನ ಇಜ್ಮೀರ್ನ ಬೈರಕ್ಲಿ ಜಿಲ್ಲೆಯಲ್ಲಿ ಕುಸಿತಗೊಂಡ 20 ವಸತಿ ಕಟ್ಟಡಗಳಲ್ಲಿ ಒಂದರಿಂದ ರಕ್ಷಿಸಲಾಗಿದೆ. ಪ್ರಬಲ ಭೂಕಂಪದಿಂದ ಸಾಕಷ್ಟು ಕಟ್ಟಡಗಳು ನಾಶವಾಗಿದ್ದು ಕಳೆದ ಎರಡು ದಿನಗಳಿಂದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಭೂಕಂಪದಿಂದ ಮನೆ ಕಳೆದುಕೊಂಡವರಿಗೆ 3000ಕ್ಕೂ ಹೆಚ್ಚು ಆಶ್ರಯ ಕೇಂದ್ರ ಹಾಗೂ 13000 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ . ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರೆ 940ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈಗಾಗಲೇ 700ಕ್ಕೂ ಹೆಚ್ಚು ಸಂತ್ರಸ್ತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 8 ಮಂದಿ ಸ್ಥಿತಿ ಗಂಭೀರವಾಗಿದೆ ಅಂತಾ ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ತಿಳಿಸಿದ್ದಾರೆ .
ಇತ್ತ 8 ಅಂತಸ್ತಿನ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಇನ್ಸಿ ಓಕಾನ್ ಹೆಸರಿನ 16 ವರ್ಷದ ಬಾಲಕಿಯನ್ನ ಸತತ 17 ಗಂಟೆಗಳ ಕಾರ್ಯಾಚರಣೆಯಲ್ಲಿ ಜೀವಂತವಾಗಿ ಹೊರತೆಗೆಯಲಾಗಿದೆ. ಈ ವೇಳೆ ಈಕೆಯ ನಾಯಿ ಕೂಡ ರಕ್ಷಣಾ ಕಾರ್ಯದ ಮೂಲಕ ಬಚಾವಾಗಿದೆ. ಟರ್ಕಿ ಆರೋಗ್ಯ ಸಚಿವ ಕೋಕಾ ಹಾಗೂ ಯುಎಂಕೆಇ ಸದಸ್ಯ ಎಡನೂರ್ ಡೋಗನ್ ಆಸ್ಪತ್ರೆಗೆ ಭೇಟಿ ನೀಡಿ ಓಕಾನ್ ಆರೋಗ್ಯ ವಿಚಾರಿಸಿದ್ದಾರೆ.