ಕೊರೊನಾ ಸೋಂಕನ್ನ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 5 ತಿಂಗಳುಗಳ ಬಳಿಕವೂ ಅನೇಕ ಮಂದಿ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಬ್ರಿಟನ್ ಮೂಲದ ಅಧ್ಯಯನವೊಂದು ಹೇಳಿದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕವೂ ದೀರ್ಘಕಾಲದವರೆಗೆ ರೋಗಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೆಲ ನ್ಯೂನ್ಯತೆಗಳನ್ನ ಗಮನಿಸಿದ್ದಾರೆ ಎಂದು ಅಧ್ಯಯನ ಹೇಳಿದೆ.
ಆರೋಗ್ಯ ಸಮೀಕ್ಷೆಯ ರಾಷ್ಟ್ರೀಯ ವಿಶ್ವವಿದ್ಯಾಲಯವು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ 1077 ಮಂದಿಯ ಮೇಲೆ ಈ ಸಮೀಕ್ಷೆಯನ್ನು ನಡೆದಿದೆ. ಈ ಸಮೀಕ್ಷೆಯಲ್ಲಿದ್ದವರೆಲ್ಲಾ ಕಳೆದ ವರ್ಷ ಮಾರ್ಚ್ನಿಂದ ನವೆಂಬರ್ ಮಧ್ಯದಲ್ಲಿ ಸೋಂಕಿಗೆ ಒಳಗಾಗಿದ್ದವರಾಗಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 67 ಪ್ರತಿಶತ ಶ್ವೇತವರ್ಣೀಯರು, 36 ಪ್ರತಿಶತ 58 ವರ್ಷ ಆಸುಪಾಸಿನ ಮಹಿಳೆಯರು ಹಾಗೂ 50 ಪ್ರತಿಶತರು ಕನಿಷ್ಟ ಎರಡು ಕಾಯಿಲೆಯಿಂದ ಬಳಲುತ್ತಿರುವವರಾಗಿದ್ರು.
ಅಧ್ಯಯನದ ಪ್ರಕಾರ, ಕೇವಲ 29 ಪ್ರತಿಶತ ಜನರು ಮಾತ್ರ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಹಾಗೂ ಶೇಕಡಾ 20ರಷ್ಟು ಮಂದಿಯಲ್ಲಿ ಹೊಸ ನ್ಯೂನ್ಯತೆಗಳು ಕಾಣಿಸಿಕೊಂಡಿದೆ. ಅಸ್ತಮಾ ಅಥವಾ ಮಧುಮೇಹದಂತಹ ಸಮಸ್ಯೆಯಿಂದ ಬಳಲುತ್ತಿದ್ದ ಮಧ್ಯ ವಯಸ್ಸಿನ ಶ್ವೇತ ವರ್ಣೀಯ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. 25 ಪ್ರತಿಶತ ಮಂದಿ ಆತಂಕ ಹಾಗೂ ಖಿನ್ನತೆಯಿಂದ ಬಳಲಿದ್ರೆ 12 ಪ್ರತಿಶತ ಮಂದಿ ಗಂಭೀರ ಪಿಟಿಎಸ್ಡಿ (post-traumatic stress disorder)ಯಿಂದ ಬಳಲಿದ್ದಾರೆ.
ನಮ್ಮ ಅಧ್ಯಯನದಲ್ಲಿ ಕೊರೊನಾದಿಂದ ಡಿಸ್ಚಾರ್ಜ್ ಆದ ಬಳಿಕ 5 ತಿಂಗಳ ಅವಧಿಯಲ್ಲಿ ಬಹುತೇಕ ಮಂದಿ ಮಾನಸಿಕ ಹಾಗೂ ದೈಹಿಕ ಸಮಸ್ಯೆಯಿಂದ ಬಳಲಿರೋದು ಕಂಡು ಬಂದಿದೆ ಎಂದು ವೈದ್ಯ ರಾಷೆಲ್ ಇವಾನ್ಸ್ ಹೇಳಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದವರ ಮೇಲೆ 5 ತಿಂಗಳುಗಳ ಕಾಲ ನಡೆಸಲಾದ ಸಮೀಕ್ಷೆಯಲ್ಲಿ ಬಹುತೇಕರಿಗೆ ಮಾಂಸಖಂಡಗಳಲ್ಲಿ ನೋವು, ಆಯಾಸ, ನಿದ್ರಾಹೀನತೆ, ಕೀಲು ನೋವು, ಅಂಗ ದೌರ್ಬಲ್ಯ, ಉಸಿರುಗಟ್ಟುವಿಕೆ ಸೇರಿದಂತೆ ನಾನಾ ಸಮಸ್ಯೆಗಳು ಕಾಣಿಸಿಕೊಂಡಿವೆ.