ಕೆಲವೊಮ್ಮೆ ಸಣ್ಣ ಸಂಗತಿಗಳು ಕೂಡ ಮನುಷ್ಯನ ಜೀವ ತೆಗೆಯಲು ಕಾರಣವಾಗಿ ಬಿಡುತ್ತದೆ. ಕ್ಯಾಲಿಫೋರ್ನಿಯಾದಲ್ಲಿ ಇಂಥದ್ದೇ ಒಂದು ಪ್ರಕರಣ ನಡೆದಿದ್ದು 69 ವರ್ಷದ ವೃದ್ಧ ಜೀವ ಕಳೆದುಕೊಂಡಿದ್ದಾರೆ.
ಅಲ್ಲಿನ ಸ್ಟಾರ್‌ಬಕ್ಸ್ ಹೊರಗೆ ಯುವಕನೊಬ್ಬ ತನ್ನ ಕಾರಿನಲ್ಲಿ ಅಬ್ಬರದ ಸಂಗೀತವನ್ನು ಹಾಕಿಕೊಂಡಿದ್ದ. ಇದರಿಂದ ಕಿರಿಕಿರಿ ಅನುಭವಿಸಿದ ರಾಬರ್ಟ್ ಕಿಟ್ನರ್ ಎಂಬ ವೃದ್ಧ ಸಣ್ಣ ದನಿಯಲ್ಲಿ ಸಂಗೀತ ಹಾಕಿಕೊಳ್ಳುವಂತೆ ಸೂಚಿಸಿದ್ದಾನೆ.
ಇದರಿಂದ ಕೆರಳಿದ ಇಪ್ಪತ್ತು ವರ್ಷದ ಯುವಕ ಬೌಮನ್ ವಾಗ್ವಾದ ನಡೆಸಿದ್ದಾನೆ. ಕೊನೆಗೆ ಜಟಾಪಟಿ ಜೋರಾಗಿ ಆತ ವೃದ್ಧನಿಗೆ ಹೊಡೆದಿದ್ದಾನೆ. ಹೊಡೆತ ತಡೆದುಕೊಳ್ಳಲಾರದೆ ವೃದ್ಧ ಕೆಳಗೆ ಉರುಳಿ ಪ್ರಜ್ಞೆ ತಪ್ಪಿದೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಾಲ್ಕು ದಿನ ಜೀವನ್ಮರಣ ಹೋರಾಟ ನಡೆಸಿದ ವೃದ್ಧ ಕೊನೆಗೂ ಇಹಲೋಕ ತ್ಯಜಿಸಿದರು. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಯುವಕನ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಹಾಗೆಯೇ ವಾಗ್ವಾದಕ್ಕೆ ನಿಖರ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ