ಬರೋಬ್ಬರಿ 6 ತಿಂಗಳಿನಿಂದ ಕಣ್ಮರೆಯಾಗಿದ್ದ ಅಮೆರಿಕದ ಉತಾಹ್ದಲ್ಲಿನ 47 ವರ್ಷದ ಮಹಿಳೆ ಕೊನೆಗೂ ಜೀವಂತವಾಗಿ ಪತ್ತೆಯಾಗಿದ್ದಾರೆ. ಈಕೆ ಟೆಂಟ್ ಒಂದರಲ್ಲಿ ವಾಸವಾಗಿದ್ದು, ಗೆಡ್ಡೆ ಗೆಣೆಸುಗಳನ್ನು ತಿಂದು ಜೀವನ ಸಾಗಿಸುತ್ತಿದ್ದರು.
ಇನ್ನೂ ಹೆಸರನ್ನ ಬಹಿರಂಗಪಡಿಸದ ಮಹಿಳೆ ನವೆಂಬರ್ 25ನೇ ತಾರೀಖಿನಿಂದ ಕಾನ್ಯೋನ್ನಿಂದ ನಾಪತ್ತೆಯಾಗಿದ್ದರು. ಅಂದಹಾಗೆ ಈಕೆ ಯಾವುದೋ ಕೋಪ ಅಥವಾ ದ್ವೇಷದಿಂದ ಮನೆ ಬಿಟ್ಟಿದ್ದಲ್ಲ. ಬದಲಾಗಿ ಈ ರೀತಿಯ ಜೀವನ ಸಾಗಿಸಬೇಕು ಎಂಬ ಸ್ವ ಇಚ್ಛೆಯಿಂದಲೇ ಮನೆಯಿಂದ ಕಣ್ಮರೆಯಾಗಿದ್ದರು ಎಂದು ತಿಳಿದು ಬಂದಿದೆ.
ಕೆಲ ಸಮಯದ ಹಿಂದಷ್ಟೇ ವಿಚ್ಛೇದನ ಪಡೆದಿದ್ದ ಈ ಮಹಿಳೆಯನ್ನ ಪೊಲೀಸರು ಡ್ರೋಣ್ ಕ್ಯಾಮರಾದ ಸಹಾಯದಿಂದ ಪತ್ತೆ ಮಾಡಿದ್ದಾರೆ. 47 ವರ್ಷದ ಈ ಮಹಿಳೆಯನ್ನ ರಾಷ್ಟ್ರೀಯ ಅರಣ್ಯದ ಕ್ಯಾಂಪ್ಗ್ರೌಂಡ್ನಲ್ಲಿ ಪತ್ತೆ ಮಾಡಲಾಗಿದೆ.
ಈ ಮಹಿಳೆಯ ತೂಕ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು ದುರ್ಬಲರಂತೆ ಕಾಣುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಿಳೆಯು ಹತ್ತಿರದ ನದಿಯಿಂದ ನೀರನ್ನ ಪಡೆಯುತ್ತಿದ್ದರು ಹಾಗೂ ಆಕೆಯ ಬಳಿ ಸ್ವಲ್ಪ ಪ್ರಮಾಣದ ಆಹಾರವೂ ಇತ್ತು. ಈಕೆ ಹುಲ್ಲು ಹಾಗೂ ಹಾವಸೆ ಸಸ್ಯಗಳನ್ನ ತಿಂದು ಜೀವನ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ. ಮಹಿಳೆಯನ್ನ ರಕ್ಷಣೆ ಮಾಡಿದ ಬಳಿಕ ಆಕೆಯನ್ನ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.