ಅಮೆರಿಕದ 5 ವರ್ಷದ ಬಾಲಕ ತನ್ನ ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ ದುಷ್ಕರ್ಮಿಗಳ ವಿರುದ್ಧ ಹೋರಾಡೋ ಮೂಲಕ ತನ್ನ ಸಾಹಸ ಹಾಗೂ ಸಮಯಪ್ರಜ್ಞೆ ತೋರಿದ್ದಾನೆ.
ಪುಟ್ಟ ಬಾಲಕ ಡೇವಿಡ್ ಜಾನ್ಸನ್ ಮತ್ತಾತನ ತಾಯಿ ತಮಿಕಾ ರೇಡ್ ಮನೆಯಲ್ಲಿದ್ದ ವೇಳೆ ಗನ್ ಹಿಡಿದಿದ್ದ ಮುಸುಕುಧಾರಿಗಳು ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮಾತ್ರವಲ್ಲದೇ ತಾಯಿ ತಮಿಕಾ ಹಣೆಗೆ ಗನ್ ಪಾಯಿಂಟ್ ಇಟ್ಟು ಬೆದರಿಸೋಕೆ ಮುಂದಾಗಿದ್ದಾರೆ. ಈ ವೇಳೆ ಸ್ಥಳದಲ್ಲೇ ಇದ್ದ ಬಾಲಕ ಡೇವಿಡ್ ದುಷ್ಕರ್ಮಿಗಳಲ್ಲಿ ಒಬ್ಬನನ್ನ ಎಳೆಯಲು ಯತ್ನಿಸಿದ್ದಾನೆ. ಹಾಗೂ ತನ್ನ ಆಟಿಕೆ ಸಾಮಗ್ರಿಗಳನ್ನ ಕಳ್ಳರ ಮೇಲೆ ಎಸೆಯೋ ಮೂಲಕ ತನ್ನ ತಾಯಿಯನ್ನ ರಕ್ಷಿಸೋಕೆ ಮುಂದಾಗಿದ್ದಾನೆ.
ಅದೃಷ್ಟವಶಾತ್ ಈ ಘಟನೆಯಿಂದ ತಾಯಿ – ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮನೆಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಪುಟ್ಟ ಪೋರನ ಸಾಹಸ ಸೆರೆಯಾಗಿದೆ.