ಚೀನಾದ ಸಂಶೋಧಕರ ತಂಡವೊಂದಕ್ಕೆ ಮೂರು ಸಹಸ್ರಮಾನಗಳಷ್ಟು ಹಳೆಯ 280 ಗ್ರಾಂಗಳ ಚಿನ್ನದ ಮಾಸ್ಕ್ ಒಂದು ಸಿಕ್ಕಿದೆ. ’ತ್ಯಾಗದ ಗುಂಡಿ’ಗಳನ್ನು ಅಗೆದು ನೋಡುವ ವೇಳೆ ಸಂಶೋಧಕರಿಗೆ ಈ ಮಾಸ್ಕ್ ಸಿಕ್ಕಿದ್ದು, ಇದು 84% ಶುದ್ಧತೆಯ ಚಿನ್ನದಿಂದ ಮಾಡಲ್ಪಟ್ಟಿದೆ. ಜೊತೆಗೆ 500ಕ್ಕೂ ಹೆಚ್ಚು ಇತರ ವಸ್ತುಗಳು ಸಹ ಸಿಕ್ಕಿವೆ.
ಚೆಂಗ್ಡು ಪ್ರಾಂತ್ಯದ ಸಾಂಗ್ಸಿಂಗ್ಡುಯಿ ಎಂಬ ಜಾಗದ 4.6 ಚದರ ಮೈಲಿ ವಿಸ್ತೀರ್ಣದಲ್ಲಿ ಅಗೆಯುವ ಕೆಲಸ ಮಾಡಿದ ಬಳಿಕ ಈ ನಿಧಿ ಸಿಕ್ಕಿದೆ. ಕ್ರಿಸ್ತಪೂರ್ವ 316ರ ವರೆಗೂ ಇಲ್ಲಿನ ಸಿಚುವಾನ್ ಅಚ್ಚುಕಟ್ಟು ಪ್ರದೇಶದಲ್ಲಿ ಆಳ್ವಿಕೆ ನಡೆಸಿದ ಶೂ ಸಾಮ್ರಾಜ್ಯದ ಕುರಿತಂತೆ ಇನ್ನಷ್ಟು ಮಾಹಿತಿ ತಿಳಿಯಲು ಈ ಅನ್ವೇಷಣೆಗಳು ಬಹಳ ನೆರವಾಗಲಿವೆ ಎಂದು ನಂಬಲಾಗಿದೆ.
ಚಿನ್ನದ ಮಾಸ್ಕ್ ಜೊತೆಗೆ, ಹಿತ್ತಳೆ, ಚಿನ್ನದ ಹಾಳೆಗಳು, ದಂತದಲ್ಲಿ ಮಾಡಲಾದ ಕರಕುಶಲ ವಸ್ತುಗಳು, ಮರದ ಡಬ್ಬಿಗಳು ಸಹ ಸಿಕ್ಕಿವೆ. 1920ರಿಂದಲೂ ಈ ಜಾಗದಲ್ಲಿ 50,000ಕ್ಕೂ ಹೆಚ್ಚು ಪ್ರಾಚ್ಯ ವಸ್ತುಗಳು ಸಿಕ್ಕಿವೆ. 1986ರಲ್ಲಿ ಹೀಗೇ ಗುಂಡಿಯೊಂದನ್ನು ತೋಡುವ ವೇಳೆ 1000ಕ್ಕೂ ಹೆಚ್ಚು ಪದಾರ್ಥಗಳು ಸಿಕ್ಕ ಬಳಿಕ ಸಂಶೋಧಕರಿಗೆ ಈ ಜಾಗದ ಮೇಲೆ ಆಸಕ್ತಿ ಸಿಕ್ಕಾಪಟ್ಟೆ ಹೆಚ್ಚಾಗಿದೆ.
ನಗು ತರಿಸುತ್ತೆ ಶಿಕ್ಷಕಿಯಿಂದ ಎಲಾನ್ ಮಸ್ಕ್ ಹೆಸರಿನ ಉಚ್ಚಾರಣೆ
ಈ ಗುಂಡಿಗಳಲ್ಲಿ ಸಿಗುತ್ತಿರುವ ವಸ್ತುಗಳನ್ನು ತ್ಯಜಿಸಲೆಂದು ಹೀಗೆ ಹೂಳಲಾಗಿದೆ ಎಂಬ ಥಿಯರಿ ಒಂದು ಇದೇ ವೇಳೆ ಸದ್ದು ಮಾಡುತ್ತಿದೆ. ಚೀನಾ ನಾಗರೀಕತೆಯ ತೊಟ್ಟಿಲು ಎಂದು ಕರೆಯಲ್ಪಡುವ ಯೆಲ್ಲೋ ನದಿ ಕಣಿವೆಯಲ್ಲಿ ವೈಭವದ ದಿನಗಳನ್ನು ಕಂಡಿದ್ದ ಶೂ ಸಂಸ್ಕೃತಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಅನುವಾಗುತ್ತಿರುವ ಈ ವಸ್ತುಗಳನ್ನು ಅಲ್ಲಿಯೇ ಇರುವ ಸಂಗ್ರಹಾಲಯದಲ್ಲಿ ಇಡಲಾಗಿದೆ.