ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್ ಸಿಗುತ್ತೆ ಅಂದರೆ ಕೆಲವರು ಏನ್ ಮಾಡೋಕೂ ರೆಡಿ ಇರ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಸಿಗುತ್ತೆ ಅಂದರೆ ಕೆಲವರು ಎಂತಹ ಸಾಹಸವನ್ನಾದರೂ ಮಾಡಿಬಿಡ್ತಾರೆ.
ಈಗಿನ ಜಮಾನದಲ್ಲಿ ನಮಗೆ ಯುಟ್ಯೂಬ್, ಟ್ವಿಟರ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ನಿಮಗೆ ಯಾವ ರೀತಿಯ ವಿಡಿಯೋ ಕೇಳಿದ್ರೂ ಸಿಗುತ್ತೆ. ಕೆಲವೊಂದು ವಿಡಿಯೋಗಳಂತೂ ಜೀವಕ್ಕೆ ಅಪಾಯ ತರುವಂತಹ ಸಾಹಸಗಳನ್ನ ಒಳಗೊಂಡಿರುತ್ತದೆ.
ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ಹೋದ 28 ವರ್ಷದ ಮಹಿಳೆ ಇದೀಗ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾಳೆ. ಇನ್ಸ್ಟಾಗ್ರಾಂ ಪೇಜ್ನಲ್ಲಿ ಖ್ಯಾತಿ ಗಳಿಸಬೇಕು ಅಂತಾ ಫ್ಲೋರಿಡಾದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯಂತೆ ನಟಿಸಲು ಹೋಗಿ ಈ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಔಡ್ರೆ ನಿಕೋಲ್ ಫ್ರಾನ್ಸಿಕ್ವಿನಿ ಎಂಬಾಕೆ ಅಮೆರಿಕನ್ ಸೀನಿಯರ್ ಹೈಸ್ಕೂಲ್ಗೆ ಎಂಟ್ರಿ ಪಡೆದಿದ್ದಾಳೆ. ಅಲ್ಲಿಂದ ವಿದ್ಯಾರ್ಥಿಗಳ ಜೊತೆ ಸಹಪಾಠಿಯಂತೆ ವರ್ತಿಸಲು ಆರಂಭಿಸಿದ್ದಾಳೆ. ಅಲ್ಲಿ ವಿದ್ಯಾರ್ಥಿಗಳ ಬಳಿ ತನ್ನ ಇನ್ಸ್ಟಾ ಖಾತೆಯನ್ನ ಫಾಲೋ ಮಾಡಿ ಎಂದು ಕೇಳಿಕೊಂಡಿದ್ದಾಳೆ. ಅಲ್ಲದೇ ಶಾಲೆಯಲ್ಲಿದ್ದ ವೇಳೆ ತನ್ನ ಫೋಟೋಗಳನ್ನ ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಹರಿಬಿಡುತ್ತಿದ್ದಳು ಎನ್ನಲಾಗಿದೆ.
ಸೆಕ್ಯೂರಿಟಿ ಗಾರ್ಡ್ಗೆ ಈಕೆಯ ನಡೆಯ ಮೇಲೆ ಅನುಮಾನ ಹುಟ್ಟಿದೆ. ಬಳಿಕ ಪೊಲೀಸರು ಈಕೆಯ ಇನ್ಸ್ಟಾಗ್ರಾಂ ಖಾತೆಯ ನೆರವಿನಿಂದಲೇ ಆಕೆಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.