ಕೊರೋನಾದಿಂದಾಗಿ ಎಲ್ಲೆಡೆ ತಿಂಗಳುಗಟ್ಟಲೆ ಲಾಕ್ ಡೌನ್ ಆಗಿದ್ದು, ಒಂದೊಂದಾಗಿ ಚಟುವಟಿಕೆಗಳು ಶುರುವಾಗುತ್ತಿವೆ.
ಈ ಚಟುವಟಿಕೆಗಳನ್ನ ಹೊಸ ಉತ್ಸಾಹದೊಂದಿಗೆ ಪುನಾರಂಭ ಮಾಡಲು ವಿಶಿಷ್ಟ ರೀತಿಯ ದಾರಿ ಹುಡುಕಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಬ್ಯಾಂಕಾಕ್ ನ ರೆಸ್ಟೋರೆಂಟ್ ಒಂದರಲ್ಲಿ ಟೇಬಲ್ ಗಳ ಮೇಲೆ ಪಾಂಡಾ ಕರಡಿಗಳ ಬೊಂಬೆಗಳನ್ನ ಇರಿಸಲಾಗಿತ್ತು. ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಜನರು ಒಂಟಿಯಾಗಿ ರೆಸ್ಟೋರೆಂಟ್ ನಲ್ಲಿ ತಿನ್ನಬಾರದು, ಕಂಪನಿ ಇಲ್ಲದೆ ಏಕಾಂಗಿ ಆಗಬಾರದು ಎಂಬ ಕಾರಣಕ್ಕೆ ಬೊಂಬೆ ಇಟ್ಟಿತ್ತು.
ಅಂತೆಯೇ ಸಿಡ್ನಿಯ ರೆಸ್ಟೋರೆಂಟ್ ನಲ್ಲಿ ಮನುಷ್ಯಾಕೃತಿಯ ರಟ್ಟಿನ ಪೆಟ್ಟಿಗೆಯ ಬೊಂಬೆಗಳನ್ನ ಇಡಲಾಗಿತ್ತು.
ಇದೀಗ ಬಾರ್ಸೆಲೋನಿಯಾದ ಒಪೆರಾ ಹೌಸ್ ಪುನಾರಂಭಗೊಂಡಿದ್ದು, ಸಂಗೀತ ಕಾರ್ಯಕ್ರಮವೊಂದು ನಡೆದಿದೆ. ಆದರಲ್ಲಿ ಕೇಳುಗರ್ಯಾರೂ ಮನುಷ್ಯರಿರಲಿಲ್ಲ. ಬದಲಿಗೆ ಇಡೀ ಒಪೆರಾ ಹೌಸ್ ನ ತುಂಬ, ಎಲ್ಲ ಕುರ್ಚಿಗಳ ಮೇಲೆ ಗಿಡಗಳು ಬಂದು ಕುಳಿತಿದ್ದವು. ಅವುಗಳೇ ಸಂಗೀತ ಕಛೇರಿಯನ್ನು ಆಸ್ವಾದಿಸಿದವು.
ಒಪೆರಾ ಹೌಸ್ ನ ಪುನಾರಂಭ ಕಾರ್ಯಕ್ರಮವನ್ನು ವಿಶಿಷ್ಟವಾಗಿಸಬೇಕು ಎಂಬ ಕಾರಣಕ್ಕೆ ಈ ಕ್ರಮ ತೆಗೆದುಕೊಂಡಿದ್ದು, ಎಲ್ಲ ಕುರ್ಚಿಗಳ ಮೇಲೆ ಕುಂಡದಲ್ಲಿ ತಂದು ಸಸಿಗಳನ್ನು ಇರಿಸಲಾಗಿತ್ತು. ತನ್ನ ಮೊದಲ ಕಾರ್ಯಕ್ರಮವನ್ನು ಹೀಗೆ ವಿಶೇಷವೆನಿಸುವಂತೆ ಮಾಡಿದ ಒಪೆರಾ ಹೌಸ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.