ಕಾಬೂಲ್: ಆಫ್ಘಾನಿಸ್ತಾನದ ಅತಿದೊಡ್ಡ ಕಾಬೂಲ್ ವಿಶ್ವವಿದ್ಯಾಲಯದ ಮೇಲೆ ಉಗ್ರರು ದಾಳಿ ನಡೆಸಿದ್ದು ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂವರು ದಾಳಿಕೋರರು ವಿಶ್ವವಿದ್ಯಾಲಯಕ್ಕೆ ನುಗ್ಗಿದ್ದು, ಆರಂಭದಲ್ಲಿ ಒಬ್ಬ ಸ್ಪೋಟಕಗಳನ್ನು ಸ್ಪೋಟಿಸಿದ್ದಾನೆ. ಭದ್ರತಾಪಡೆಗಳು ಇಬ್ಬರನ್ನು ಹೊಡೆದುರುಳಿಸಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರೀಕ್ ಏರಿಯನ್ ಮಾಹಿತಿ ನೀಡಿದ್ದಾರೆ.
ತಮ್ಮ ಸಂಘಟನೆಗೆ ಸೇರಿದ ಉಗ್ರರು ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ತಾಲಿಬಾನ್ ತಿಳಿಸಿದೆ. ಐಸಿಸ್ ನಂತಹ ಉಗ್ರಗಾಮಿ ಗುಂಪುಗಳು ಹಿಂದೆ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದವು. ಮೃತಪಟ್ಟವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಫರ್ಡಾವ್ಸ್ ಫರಾಮೆರ್ಜ್ ಹೇಳಿದ್ದಾರೆ.
ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಮೇಳ ಉದ್ಘಾಟನೆಗೆ ಸರ್ಕಾರಿ ಅಧಿಕಾರಿಗಳು ಆಗಮಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವಾಲಯದ ವಕ್ತಾರ ಹಮೀದ್ ಒಬೈದಿ ತಿಳಿಸಿದ್ದಾರೆ.
2016 ರಲ್ಲಿ ಕಾಬೂಲ್ ನಲ್ಲಿರುವ ಅಮೆರಿಕನ್ ಯೂನಿವರ್ಸಿಟಿ ಆಫ್ ಆಫ್ಘಾನಿಸ್ತಾನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 16 ಮಂದಿ ಮೃತಪಟ್ಟಿದ್ದರು.