ಹಲವು ಬಾರಿ ಅಚ್ಚರಿ ಎನಿಸುವಂತಹ ಅನೇಕ ಘಟನೆಗಳು ನಮ್ಮೆದುರು ನಡೆದು ಹೋಗುತ್ತದೆ. ವಯಸ್ಸಿನಲ್ಲಿ ಚಿಕ್ಕವರಾದರೂ ಅದೆಲ್ಲಿಂದ ಧೈರ್ಯ ಬರುತ್ತದೆಯೋ ಗೊತ್ತಿಲ್ಲ. ಹಿಡಿದ ಕೆಲಸ ಅದೆಷ್ಟೇ ದೊಡ್ಡದು ಅಥವಾ ಕಷ್ಟದ್ದಿದ್ದರೂ ಮಾಡಿ ಮುಗಿಸಿಬಿಡುತ್ತಾರೆ.
ಅಮೆರಿಕಾದ ಇಂಡಿಯಾನ ಎಂಬಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ತನ್ನ ಅಜ್ಜಿಯ ಜೀವ ಉಳಿಸುವುದಕ್ಕಾಗಿ 11 ರ ಹರೆಯದ ಬಾಲಕ ಕಾರು ಚಲಾಯಿಸಿದ್ದಾನೆ. ಈ ಮೂಲಕ ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದಾನೆ.
ವಾಯುವಿಹಾರ ಮಾಡುತ್ತಿದ್ದ ಅಜ್ಜಿ ಏಂಜಲಾ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗಿ ಕುಸಿದಿದ್ದಾರೆ. ಕಣ್ಣು ಕಾಣದಂತಾಗಿದೆ. ಕೈ-ಕಾಲು ಸೋಲು ಬಂದು ನಡುಗುತ್ತಾ ರಸ್ತೆಬದಿಯ ಫಲಕದ ಕಂಬವೊಂದಕ್ಕೆ ಒರಗಿ ಕುಳಿತಿದ್ದಾರೆ.
ಅಲ್ಲೇ ಆಟ ಆಡುತ್ತಿದ್ದ 11 ವರ್ಷದ ಮೊಮ್ಮಗ ಪಿಜೆ ಬ್ರೇವರ್ ಲೇ, ತಕ್ಷಣವೇ ತನ್ನ ಆಟದ ಸಾಮಾನಿನ ಕಾರನ್ನು ತೆಗೆದುಕೊಂಡು ಮನೆಗೆ ಹೋಗಿ, ಮನೆಯಲ್ಲಿದ್ದ ಮರ್ಸಿಡಿಸ್ ಬೆನ್ಜ್ ಕಾರನ್ನು ಚಲಾಯಿಸಿಕೊಂಡು ಬಂದು ಅಜ್ಜಿಯನ್ನು ಮನೆಗೆ ಕರೆದೊಯ್ದಿದ್ದಾನೆ. ಮುಂದಿನ ವಾರ ಈತನಿಗೆ 12 ವರ್ಷ ತುಂಬಲಿದೆ.
ಇಷ್ಟು ಚಿಕ್ಕ ವಯಸ್ಸಿಗೆ ಆತನ ಸಾಹಸಕ್ಕೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಅವನ ತಾಯಿಗಿಂತ ಅವನೇ ಚೆನ್ನಾಗಿ ಕಾರು ಓಡಿಸುತ್ತಾನೆ ಎಂದು ಅಜ್ಜಿ ಕೂಡ ಬೆನ್ನು ತಟ್ಟಿದ್ದಾರೆ.