
ಸ್ಪೇನ್ ರಾಜಕುಮಾರಿಯ ಬಗ್ಗೆ ನೀವು ಕೇಳಿರಬಹುದು. ಈಕೆಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಹಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲ ಬೆಡಗಿಯರ ಸೌಂದರ್ಯವನ್ನು ಹಿಂದಿಕ್ಕಬಲ್ಲ ಅಂದ ಲೆಟಿಜಿಯಾ ಅವರದ್ದು. ಆಧುನಿಕ ದಿರಿಸಿನಲ್ಲೂ ಇವರನ್ನು ನೀವು ನೋಡಿರಬಹುದು.
ಈಗ ಈಕೆಗೆ 41 ವರ್ಷ. ಎರಡು ಮಕ್ಕಳ ತಾಯಿ. ಇವರಿಗೆ ಕಪ್ಪು ಬಿಳುಪು ಬಟ್ಟೆಗಳೆಂದರೆ ಬಹಳ ಇಷ್ಟ. ಮಾಧ್ಯಮದ ಮುಂದೆ ಕಾಣಿಸುವಾಗಲೂ ಅಷ್ಟೇ, ಅದೇ ಕಾಂಬಿನೇಷನ್ ಬಟ್ಟೆ ಧರಿಸಿರುತ್ತಾರೆ. ಪ್ರಸಿದ್ಧ ಫ್ಯಾಶನ್ ಡಿಸೈನರ್ ಮ್ಯಾನುವಲ್ ಪಟ್ಗಾರ್ಝ್ ಇವರ ವಸ್ತ್ರ ವಿನ್ಯಾಸ ಮಾಡುತ್ತಾರೆ.
ಸದಾ ಹೀಲ್ಸ್ ಧರಿಸುವ ಈಕೆಯದ್ದು ಸರಳ ಸೂತ್ರ. ಅಲಂಕಾರಿಕ ಉಡುಗೆಗಳ ಜೊತೆ ಸರಳವಾದ ಹೀಲ್ಸ್ ಇಲ್ಲವೇ ಅಲಂಕಾರಿಕ ಪಾದರಕ್ಷಣೆಗಳನ್ನು ಧರಿಸುತ್ತಾರೆ. ಆಯಾ ಬಣ್ಣಕ್ಕೆ ಹೋಲಿಕೆಯಾಗುವ ಚಪ್ಪಲನ್ನೇ ಧರಿಸಿ ಫ್ಯಾಶನ್ ಲೋಕದವರ ಕಣ್ಣಿಗೆ ಬಲು ಪ್ರಿಯರಾಗಿದ್ದಾರೆ.
ಆಧುನಿಕ ವಿನ್ಯಾಸಗಳಲ್ಲಿ ಬಹುತೇಕ ಎಲ್ಲವನ್ನೂ ಪ್ರಯೋಗಿಸುವ ಈಕೆಗೆ ಹೊಸ ಉಡುಪು ಧರಿಸುವ ವಿಷಯಕ್ಕೆ ಬೇಸರವಿಲ್ಲ. ಮದುವೆ ಕಾರ್ಯಕ್ರಮವೊಂದರಲ್ಲಿ ಉದ್ದನೆಯ ಗೌನ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಆಯ್ಕೆಯಲ್ಲಿ ಜಾಣತನ ತೋರಿಸುವುದು ಇವರ ಇನ್ನೊಂದು ಹೆಗ್ಗಳಿಕೆ .
41 ವರ್ಷವಾದರೂ ಮುಖದ ಮಾದಕತೆ ಮಾಸಿಲ್ಲ. ನೈಸರ್ಗಿಕವಾಗಿ ಸುಂದರವಾಗಿರುವ ಆಕೆ ಮೇಕಪ್ ಮೂಲಕ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ. ನಿತ್ಯ ಸ್ಪಾಗೆ ಹೋಗಿ ಫೇಶಿಯಲ್, ಟೋನಿಂಗ್, ಒತ್ತಡ ನಿವಾರಕ ವ್ಯಾಯಾಮಗಳಲ್ಲಿ ತೊಡಗಿಕೊಳ್ಳುತ್ತಾರೆ.