
ಸದಾ ಒಂದಿಲ್ಲೊಂದು ಕುತಂತ್ರ ಬುದ್ದಿಯಿಂದ ಭಾರತವನ್ನು ಕೆಣಕಿ ಮುಜುಗರಕ್ಕೀಡಾಗುವ ಪಾಪಿ ಪಾಕಿಸ್ತಾನ, ಮತ್ತೊಂದು ಕುತುಂತ್ರದ ಬಲೆ ಎಣೆದಿರೋದು ಬೆಳಕಿಗೆ ಬಂದಿದೆ. ಭಾರತವೇ ಭಯೋತ್ಪಾದನೆಗೆ ಪ್ರಚೋದನೆ, ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ಇದಕ್ಕೆ ಬೇಕಾದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದೆ.
ಹೌದು, ಹಲವು ಬಾರಿ ಭಾರತದ ಎದುರು ಮುಜುಗರಕ್ಕೀಡಾಗುವ ಮೂಲಕ ತನ್ನ ಯೋಗ್ಯತೆಯನ್ನು ಇಡೀ ಪ್ರಪಂಚದ ಮುಂದೆ ಪ್ರದರ್ಶನಕ್ಕಿಡುವ ಪಾಕಿಸ್ತಾನ, ಇದೀಗ ತನ್ನ ಉಗ್ರ ಪೋಷಣೆ ಮತ್ತು ಗೂಢಚರ್ಯೆ ಕುತಂತ್ರದಿಂದ ಮತ್ತೊಮ್ಮೆ ಮುಜುಗರಕ್ಕೆ ಈಡಾಗಿದೆ. ಈ ಕುತಂತ್ರಗಳನ್ನು ಭಾರತ ಯಾವಾಗ ಬಟಾಬಯಲು ಮಾಡಿತೋ ಆಗ ಭಾರತದ ವಿರುದ್ಧ ನಕಲಿ ದಾಖಲೆ ಸೃಷ್ಟಿ ಮಾಡಿದೆ.
ಕಳೆದ ಒಂದು ವರ್ಷದಿಂದ ಈ ರೀತಿ ನಕಲಿ ದಾಖಲೆಗಳನ್ನು ಸಿದ್ಧಪಡಿಸಿದೆ ಎಂದು ಹೇಳಲಾಗಿದೆ. ಇದರಲ್ಲಿನ ಒಂದು ಕಡತವನ್ನು ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಎದುರು ಇಟ್ಟಿತ್ತು. ಅಲ್ಲದೆ ಇಬ್ಬರು ಭಾರತೀಯರಿಗೆ ಉಗ್ರರು ಎಂದು ನೇಮ್‌ಬೋರ್ಡ್ ಕೊಟ್ಟು ನಿರ್ಬಂಧ ಮಾಡುವಂತೆ ಒತ್ತಾಯಿಸಿತ್ತು. ಇದು ಯಾವಾಗ ಸಾಧ್ಯವಾಗಲಿಲ್ಲವೋ ಆಗ ಇನ್ನಷ್ಟು ದಾಖಲೆಗಳನ್ನು ಸೃಷ್ಟಿ ಮಾಡಿದೆ. ಪಾಕ್ ರಾಷ್ಟ್ರೀಯ ಭದ್ರತಾ ವಿಭಾಗದಲ್ಲಿನ ವಿಶೇಷ ಸಹಾಯಕ ಮೊಯೀದ್ ಯೂಸುಫ್ ಈ ಕುತಂತ್ರದ ನೇತೃತ್ವ ಹೊತ್ತಿದ್ದಾರೆ ಎನ್ನಲಾಗಿದೆ.