ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕೊರನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಆದ್ರೆ ಪ್ರಯೋಗದ ಮಧ್ಯೆಯೇ ಜನರಿಗೆ ಲಸಿಕೆ ನೀಡುವ ಕೆಲಸ ನಡೆದಿದೆ. ಇಂಡೋನೇಷ್ಯಾ ನವೆಂಬರ್ – ಡಿಸೆಂಬರ್ ನಡುವೆ ಕೊರೊನಾ ಲಸಿಕೆ ನೀಡುವ ತಯಾರಿ ನಡೆಸಿದೆ.
ಇಂಡೋನೇಷ್ಯಾದ 91 ಲಕ್ಷ ಜನರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ನೀಡಲಿದೆ. ಇಂಡೋನೇಷ್ಯಾದ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ. ಮೊದಲ ಹಂತದಲ್ಲಿ ಕೊರೊನಾ ವೈರಸ್ ಸೋಂಕಿನ ಅಪಾಯದಲ್ಲಿರುವ ಜನರಿಗೆ ಲಸಿಕೆ ನೀಡಲಾಗುವುದು. ವಿಮಾನ ನಿಲ್ದಾಣದ ಕೆಲಸಗಾರರು, ಸೈನಿಕರು ಮತ್ತು ಪೊಲೀಸರು ಸೇರಿದಂತೆ ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ನೌಕರರು ಇದರಲ್ಲಿ ಸೇರಲಿದ್ದಾರೆ.
ಲಸಿಕೆಯನ್ನು 18 ರಿಂದ 59 ವರ್ಷದೊಳಗಿನವರಿಗೆ ಮಾತ್ರ ನೀಡಲಾಗುವುದು. ಇನ್ನು ಹೆಚ್ಚು ವಯಸ್ಸಿನವರ ಮೇಲೆ ಕೊರೊನಾ ಲಸಿಕೆ ಪ್ರಯೋಗ ನಡೆದಿಲ್ಲ. ಹಾಗಾಗಿ ಅವರಿಗೆ ನೀಡಲಾಗುವುದಿಲ್ಲವೆಂದು ಸರ್ಕಾರ ಹೇಳಿದೆ. ಇಂಡೋನೇಷ್ಯಾ ಪ್ರಸ್ತುತ ಚೀನಾ ಮತ್ತು ದಕ್ಷಿಣ ಕೊರಿಯಾದ ಲಸಿಕೆ ಅಭಿವೃದ್ಧಿಗೆ ನೆರವು ನೀಡ್ತಿದೆ.
ಇಸ್ರೇಲ್‌ನಲ್ಲಿ ಕೋವಿಡ್ -19 ಗಾಗಿ ಅಭಿವೃದ್ಧಿಪಡಿಸಿದ ಬ್ರಿಲೈಫ್ ಲಸಿಕೆಯ ಮಾನವ ಪ್ರಯೋಗಗಳು ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗಲಿವೆ. ಲಸಿಕೆಯನ್ನು ಇಸ್ರೇಲ್ ಇನ್ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ರಿಸರ್ಚ್ ಅಭಿವೃದ್ಧಿಪಡಿಸಿದೆ.