ಕೊರೊನಾ ಸೋಂಕು ಬಂದು ಗುಣವಾದ ಮೇಲೂ ವ್ಯಕ್ತಿಗಳಲ್ಲಿ ಆರೋಗ್ಯ ಸಮಸ್ಯೆ ಶಾಶ್ವತವಾಗಿ ಕಾಡುತ್ತದೆ ಎಂದು ಹೇಳಲಾಗುತ್ತಿದೆ. ಈ ಪ್ರಶ್ನೆ ಉದ್ಭವವಾಗಲು ಕಾರಣ ಚೀನಾದ ವುಹಾನ್ ನಗರದಲ್ಲಿ ಗುಣಮುಖವಾದ ವ್ಯಕ್ತಿಗಳ ಶ್ವಾಸಕೋಶ ಹಾನಿಗೊಳಪಟ್ಟಿರುವುದು. ಅಲ್ಲಿನ ಶೇ.90 ರಷ್ಟು ಜನರ ಶ್ವಾಸಕೋಶ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.
ಅಷ್ಟೆ ಅಲ್ಲದೆ ಗುಣಮುಖರಾದವರ ಪೈಕಿ 5 ರಷ್ಟು ಜನಕ್ಕೆ ಎರಡನೇ ಬಾರಿ ಸೋಂಕು ತಗುಲಿರುವುದು ಖಚಿತವಾಗಿದೆ. ಈ ವಿಚಾರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಜೊತೆಗೆ ಶ್ವಾಸಕೋಶ ಹಾನಿಯಾಗಿರುವ ಬಗ್ಗೆ ವುಹಾನ್ ವಿಶ್ವವಿದ್ಯಾಲಯದ ಝೊಂಗ್ನಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ಮುಖ್ಯಸ್ಥ ಪೆಂಗ್ ಝಿಯಾಂಗ್ ನಡೆಸಿರುವ ತಪಾಸಣೆಯಲ್ಲಿ ಬಹಿರಂಗವಾಗಿದೆ.
ಇನ್ನು ಕೊರೊನಾ ಬಂದು ಗುಣಮುಖರಾದವರು ಪೈಕಿ ಒಂದಿಷ್ಟು ಮಂದಿಗೆ ರೋಗ ನಿರೋಧಕ ಶಕ್ತಿ ಕುಂದುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ಕಡೆ ಕೊರೊನಾದಿಂದಾಗಿ ಜನ ಬೇಸತ್ತಿದ್ದಾರೆ. ಇದರ ನಡುವೆ ಗುಣಮುಖರಾದವರಲ್ಲಿ ಶ್ವಾಸಕೋಶ ಹಾನಿಯಾಗುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.