ಕೊರೊನಾ ವೈರಸ್ ಸೋಂಕು ದೇಶದಲ್ಲಿ ದಿನೇ ದಿನೇ ಹೆಚ್ಚಾಗ್ತಿದೆ. ಚಳಿಗಾಲದಲ್ಲಿ ಇದ್ರ ಸಂಖ್ಯೆ ಹೆಚ್ಚಾಗಬಹುದೆಂದು ಈಗಾಗಲೇ ಹೇಳಲಾಗಿದೆ. ಈ ಮಧ್ಯೆ ಸಮೀಕ್ಷೆಯೊಂದು ಮತ್ತೊಂದು ಆಘಾತಕಾರಿ ಸಂಗತಿ ಹೇಳಿದೆ. ಹಬ್ಬದ ಋತುವಿನಲ್ಲಿ ಶೇಕಡಾ 36ರಷ್ಟು ಭಾರತೀಯರು ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾರಂತೆ.
ಭಾರತದಲ್ಲಿ ಹಬ್ಬದ ಋತು ಶುರುವಾಗ್ತಿದೆ. ದಸರಾ, ದೀಪಾವಳಿ ಸೇರಿದಂತೆ ಒಂದಾದ ಮೇಲೆ ಒಂದು ಹಬ್ಬ ಬರ್ತಿದೆ. ಸಾಮಾಜಿಕ ಕಾರ್ಯಕ್ರಮ, ದುರ್ಗಾ ಪೂಜೆ, ಮೇಳವನ್ನು ಆಯೋಜನೆ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜನರು ಸಿದ್ಧರಾಗ್ತಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಜನರ ಪೈಕಿ ಶೇಕಡಾ 36ರಷ್ಟು ಮಂದಿ ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿಸಿದ್ದಾರೆ. ಭಾರತದ 226 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆದಿದೆ.
ಪ್ರಶ್ನೆಗೆ ಉತ್ತರಿಸಿದ ಮೂರು ಪ್ರತಿಶತದಷ್ಟು ಜನರು ನೆರೆಹೊರೆಯ ಕಾರ್ಯಕ್ರಮಗಳಿಗೆ ಹಾಜರಾಗುವುದಾಗಿ ಹೇಳಿದ್ದಾರೆ. ಮೂರು ಪ್ರತಿಶತದಷ್ಟು ಜನರು ಖಾಸಗಿ ಸಮಾರಂಭಗಳಿಗೆ ಅಥವಾ ಪಾರ್ಟಿಗಳಿಗೆ ಹಾಜರಾಗುವುದಾಗಿ ಹೇಳಿದ್ದಾರೆ. 23 ಪ್ರತಿಶತದಷ್ಟು ಜನರು ತಮ್ಮ ಆಪ್ತ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಏಳು ಪ್ರತಿಶತದಷ್ಟು ಜನರು ಮೇಲೆ ತಿಳಿಸಿದ ಎಲ್ಲ ಕೆಲಸದಲ್ಲಿ ಆಸಕ್ತಿ ಹೊಂದಿದ್ದಾರೆ. 51 ಪ್ರತಿಶತದಷ್ಟು ಜನರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ. ಶೇಕಡಾ 36 ರಷ್ಟು ಭಾರತೀಯರು ಸಾಮಾಜಿಕವಾಗಿರಲು ಬಯಸಿದ್ದಾರೆ.