ವಿಶ್ವಾದ್ಯಂತ ಕೊರೊನಾ ವೈರಸ್ ವೇಗವಾಗಿ ಹರಡುತ್ತಿದೆ. ವಿಶ್ವಾದ್ಯಂತ ಒಂಬತ್ತು ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿಗೆ ಸೂಕ್ತ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕೊರೊನಾ ಮಧ್ಯೆ ಜನರಲ್ಲಿ ಬೊಜ್ಜು ದೊಡ್ಡ ಸಮಸ್ಯೆಯಾಗಿ ಕಾಡ್ತಿದೆ.
ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇದು ಜೀವನಶೈಲಿ ಮತ್ತು ದಿನನಿತ್ಯದ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಲಾಕ್ ಡೌನ್ ಕಾರಣ, ಜನರಲ್ಲಿ ಬೊಜ್ಜು ವೇಗವಾಗಿ ಹೆಚ್ಚುತ್ತಿದೆ.
ವೆಬ್‌ಎಂಡಿ ನಡೆಸಿದ ಸಮೀಕ್ಷೆಯ ಪ್ರಕಾರ, ಲಾಕ್ ಡೌನ್ ಕಾರಣ ಅಮೆರಿಕಾದಲ್ಲಿ ಹೆಚ್ಚಿನ ಜನರು ಸೋಂಕಿಗೆ ಒಳಗಾಗಿದ್ದಾರೆ. ಜನರು ಮನೆಯಲ್ಲಿ ಬಂಧಿಯಾಗಿದ್ದು, ವ್ಯಾಯಾಮ, ವಾಕಿಂಗ್ ಇಲ್ಲದಂತಾಗಿದೆ. ಶೇಕಡಾ 22 ರಷ್ಟು ಪುರುಷರ ತೂಕ ಈ ಸಂದರ್ಭದಲ್ಲಿ ಹೆಚ್ಚಾಗಿದ್ದರೆ, ಶೇಕಡಾ 47ರಷ್ಟು ಮಹಿಳೆಯರಲ್ಲಿ ತೂಕ ಹೆಚ್ಚಾಗಿದೆ.
ಒತ್ತಡ, ಕಳಪೆ ಜೀವನ ಶೈಲಿ ಹಾಗೂ ಆಲ್ಕೋಹಾಲ್ ಸೇವನೆ ಇದಕ್ಕೆ ಕಾರಣವಾಗಿದೆ. ಮನೆಯಲ್ಲಿ ಕೆಲಸ ಮಾಡ್ತಿರುವ ಜನರು ಪ್ಯಾಕೇಜ್ ಫುಡ್ ಮೊರೆ ಹೋಗಿದ್ದಾರೆ. ಆರೋಗ್ಯದ ಬಗ್ಗೆ ಗಮನ ನೀಡ್ತಿಲ್ಲ.
ಇದು ಜನರಲ್ಲಿ ವೇಗವಾಗಿ ತೂಕ ಹೆಚ್ಚಾಗಲು ಕಾರಣವಾಗಿದೆ. ಇದ್ರಲ್ಲೂ ಮಹಿಳೆಯರು ಹೆಚ್ಚು ತೂಕ ಹೆಚ್ಚಳ ಸಮಸ್ಯೆಗೆ ಒಳಗಾಗ್ತಿದ್ದಾರೆ. ಮಹಿಳೆಯರು ಮನೆ, ಕಚೇರಿ ಕೆಲಸದ ಜೊತೆ ವ್ಯಾಯಾಮ, ಆರೋಗ್ಯ ನಿರ್ಲಕ್ಷ್ಯ ಮಾಡಿದ್ದು, ಸದಾ ಒತ್ತಡದಲ್ಲಿರುವುದು ಬೊಜ್ಜು ಹೆಚ್ಚಾಗಲು ಮುಖ್ಯ ಕಾರಣವಾಗ್ತಿದೆ.