ಕೊರೊನಾ ಮಹಾಮಾರಿಯ ರುದ್ರ ತಾಂಡವ ಇನ್ನೂ ನಿಂತಿಲ್ಲ. ಪ್ರತಿ ನಿತ್ಯ ಲಕ್ಷಾಂತರ ಕೇಸ್‌ಗಳು ದಾಖಲಾಗುತ್ತಲೇ ಇವೆ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಸೋಂಕು ಹರಡುವಿಕೆ ವೇಗದಲ್ಲಿ ಆಗುತ್ತಿರೋದ್ರಿಂದ ಭಯದ ವಾತಾವರಣ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಜಾಗತಿಕವಾಗಿ 10 ಜನರಲ್ಲಿ ಒಬ್ಬರಿಗೆ ಸೋಂಕು ತಗುಲುತ್ತಿದೆ. ಹಾಗೆಯೇ ಈಗಿರುವ ಸೋಂಕಿತರ ಸಂಖ್ಯೆಗಿಂತ 20 ರಷ್ಟು ಜನರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂತಲೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಮತ್ತಷ್ಟು ಆಘಾತಕ್ಕೆ ಎಡೆ ಮಾಡಿಕೊಟ್ಟಿದೆ.
ಇನ್ನು ಈ ಕೊರೊನಾದಿಂದ ಪ್ರಪಂಚ ಮುಕ್ತವಾಗೋದು ಯಾವಾಗ ಎಂಬ ಪ್ರಶ್ನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಜಿನೀವಾದಲ್ಲಿ ನಡೆದ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಸುಮಾರು 10 ತಿಂಗಳುಗಳ ಕಾಲ ಈ ಕೊರೊನಾ ವೈರಸ್ ಆರ್ಭಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ತೀರಾ ಕಡಿಮೆ ಎಂದು ಅಂದಾಜಿಸಲಾಗಿದೆ.
ಲಾಕ್‌ಡೌನ್ ಸಡಿಲದ ನಂತರ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಹರಡುವಿಕೆಯಲ್ಲಿ ಹೆಚ್ಚಾಗಿದೆ. ವಿಶ್ವದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇದನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿಲ್ಲ. ಇನ್ನು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಇನ್ನೂ ಹೆಚ್ಚಾದರೂ ಆಶ್ಚರ್ಯ ಪಡಬೇಕಿಲ್ಲ ಎನ್ನಲಾಗುತ್ತಿದೆ.